ಸಂಸದ ಯದುವೀರ್ ಒಡೆಯರ್‌ಗೆ ಹೈಕೋರ್ಟ್ ನೋಟಿಸ್; ಆಯ್ಕೆ ಅಸಿಂಧು ಕೋರಿ ರೇವತಿ ರಾಜ್ ಅರ್ಜಿ

ಬೆಂಗಳೂರು: ಮೈಸೂರು-ಕೊಡಗು ಸಂಸದರ ಆಯ್ಕೆ ಅಸಿಂಧುಗೊಳಿಸಿ, ಆ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದಿಂದ (ಬಿಎಸ್‌ಪಿ) ಸ್ಪರ್ಧಿಸಿದ್ದ ರೇವತಿ ರಾಜ್‌ ಅಲಿಯಾಸ್‌ ಭೀಮಪುತ್ರಿ ರೇವತಿ ರಾಜ್ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ಜಿ. ಪಂಡಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರತಿವಾದಿಗಳಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಮನವಿ ಏನು?
ಕಳೆದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2024ರ ಏಪ್ರಿಲ್ 4ರಂದು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಲಾಗಿತ್ತು. ಆದರೆ, ನಾಮಪತ್ರದ ಕಲಂ 7, 7(ಎ), 7(ಎ)(ಬಿ) ಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಲ್ಲ. ಆದ ಕಾರಣ, ಏಪ್ರಿಲ್ 5ರ ಬೆಳಗ್ಗೆ 11 ಗಂಟೆಯ ಒಳಗೆ ಸರಿಯಾಗಿ ಭರ್ತಿ ಮಾಡಿ ನಾಮಪತ್ರ ಸಲ್ಲಿಸಬೇಕು ಎಂದು ಚುನಾವಣಾಧಿಕಾರಿ ಸೂಚಿಸಿದ್ದರು. ಅದರಂತೆಯೇ ಸೂಕ್ತ ಸಮಯದಲ್ಲಿ ನಾಮಪತ್ರ ಸಲ್ಲಿದ್ದರೂ ಅದನ್ನು ತಿರಸ್ಕರಿಸಲಾಗಿದೆ. ಈ ಸಂಬಂಧ ರಾಜ್ಯ ಮಖ್ಯ ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು, ನಾಮಪತ್ರ ತಿರಸ್ಕರಿಸಿದ್ದ ಅಂದಿನ ಚುನಾವಣಾಧಿಕಾರಿ/ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಅವರ ಆದೇಶ ರದ್ದುಪಡಿಸಿ, ನಾಮಪತ್ರವನ್ನು ಅಂಗೀಕರಿಸಬೇಕು. ಸಂಸದ ಯದುವೀರ್‌ ಅವರ ಆಯ್ಕೆ ಅಸಿಂಧುಗೊಳಿಸಿ, ಮೈಸೂರು-ಕೊಡಗು ಲೋಕಸಭೆ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಸಲು ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

 

ಪ್ರಕರಣದ ವಿವರ:
EP 1/2024
Revathi Raj (Aka Bheemaputri Revathi Raj) Vs Yaduveer Krishnadatta Chamaraja Wadiyar & Others

Related Articles

Comments (0)

Leave a Comment