ಮಹಿಳೆಯರಿಗೆ ಗೌರವ ನೀಡದ ರೇಣುಕಾಸ್ವಾಮಿಯನ್ನು ರಾಷ್ಟ್ರೀಯ ನಾಯಕನಂತೆ ತೋರಿಸಲಾಗುತ್ತಿದೆ; ದರ್ಶನ್ ಪರ ವಕೀಲರ ಆಕ್ಷೇಪ
- by Jagan Ramesh
- November 26, 2024
- 208 Views
ಬೆಂಗಳೂರು: “ಪವಿತ್ರಾ ಗೌಡ ಅವರನ್ನು ರೇಣುಕಾಸ್ವಾಮಿ ಮಂಚಕ್ಕೆ ಕರೆದಿದ್ದಾನೆ. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸದ, ಸರಿಯಾದ ನಡತೆ ಹೊಂದಿರದ, ಕಾನೂನಿಗೆ ಎಳ್ಳಷ್ಟೂ ಗೌರವ ನೀಡದ ವ್ಯಕ್ತಿಯನ್ನು ಈ ಪ್ರಕರಣದಲ್ಲಿ ರಾಷ್ಟ್ರೀಯ ನಾಯಕ ಎಂಬಂತೆ ಬಿಂಬಿಸಲಾಗುತ್ತಿದೆ. ಬಣ್ಣದ ಬದುಕಿನಲ್ಲಿ ನಾಯಕನಾಗಿದ್ದರೂ ದರ್ಶನ್ ಅವರನ್ನು ವಿಲನ್ ರೀತಿಯಲ್ಲಿ ಕಾಣಲಾಗುತ್ತಿದೆ” ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಆಕ್ಷೇಪಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್. ನಾಗರಾಜು, ಎಂ. ಲಕ್ಷ್ಮಣ್, ಅನು ಕುಮಾರ್ ಹಾಗೂ ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಎರಡು ತಾಸಿಗೂ ಅಧಿಕ ಸಮಯ ವಾದ ಮಂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು ಕೊಲೆ ಮಾಡಲಾಗಿಲ್ಲ ಎಂದು ಪ್ರಬಲವಾಗಿ ವಾದ ಮಂಡಿಸಿದರು.
ಸಿ.ವಿ. ನಾಗೇಶ್ ವಾದ ಮಂಡನೆ ಹೀಗಿತ್ತು:
- ನಮ್ಮ ಸಮಾಜದಲ್ಲಿ ಮಹಿಳೆಯರನ್ನು ದೇವತೆಯರಾದ ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೇಶ್ವರಿ ಎಂದು ಕರೆಯುತ್ತೇವೆ. ಆದರೆ, ಮಹಿಳೆಯರ ಘನತೆಗೆ ಧಕ್ಕೆ ತರುವ ಕೆಲಸವನ್ನು ಕೊಲೆಯಾಗಿರುವ ರೇಣುಕಾಸ್ವಾಮಿ ಮಾಡಿದ್ದಾನೆ. ಆತನ ನಡತೆ, ವ್ಯಕ್ತಿತ್ವವನ್ನೂ ನೋಡದೇ ಆತನನ್ನು ರಾಷ್ಟ್ರೀಯ ನಾಯಕನೆಂಬಂತೆ ಬಿಂಬಿಸಲಾಗುತ್ತಿದೆ. ಗೌತಮ್ ಹೆಸರಿನಲ್ಲಿ ರೇಣುಕಾಸ್ವಾಮಿ ಇನ್ಸ್ಟಾಗ್ರಾಂನಲ್ಲಿ ಕಳುಹಿಸಿರುವ ಸಂದೇಶಗಳನ್ನು ನೋಡಿದರೆ ಆತ ಏನೆಂದು ಅರ್ಥವಾಗುತ್ತದೆ. ಆರೋಪಪಟ್ಟಿಯಲ್ಲಿ ದರ್ಶನ್ ಅವರ ಕಲರ್ ಫೋಟೋಗಳನ್ನು ಹಾಕುವ ಬದಲು ರೇಣುಕಾಸ್ವಾಮಿ ಕಳುಹಿಸಿರುವ ಚಿತ್ರ/ಸಂದೇಶಗಳನ್ನು ಕಲರ್ ಫೋಟೋ ಮಾಡಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು.
- ಪ್ರಾಸಿಕ್ಯೂಷನ್ ಪ್ರಕಾರ ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದು ಮಧ್ಯಾಹ್ನ 1 ಗಂಟೆಯಿಂದ 6 ಗಂಟೆ ನಡುವೆ ಪಟ್ಟಣಗೆರೆಯ ಜಯಣ್ಣ ಷೆಡ್ನಲ್ಲಿ ಅಂದೇ ಕೊಲೆ ಮಾಡಲಾಗಿದೆ. ರೇಣುಕಾಸ್ವಾಮಿಯ ಮೃತದೇಹವು ಅಪಾರ್ಟ್ಮೆಂಟ್ ಒಂದರ ಬಳಿ ಜೂನ್ 9ರಂದು ಪತ್ತೆಯಾಗಿದೆ. ಅಲ್ಲಿನ ಭದ್ರತಾ ಸಿಬ್ಬಂದಿ ನೀಡಿದ ದೂರು ಆಧರಿಸಿ, ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 364 ಆರೋಪವು ಅಪಹರಣಕ್ಕೆ ಸಂಬಂಧಿಸಿದ್ದಾಗಿದೆ. ರೇಣುಕಾಸ್ವಾಮಿ ಅಪ್ರಾಪ್ತನಲ್ಲ. ಅಲ್ಲದೇ, ಆತನನ್ನು ದೇಶದಿಂದ ಹೊರಕ್ಕೆ ಕೊಂಡೊಯ್ಯುವುದು ಪ್ರಾಸಿಕ್ಯೂಷನ್ ವಾದವಲ್ಲ. ಆದ್ದರಿಂದ, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಕೊಲೆ ಮಾಡಲಾಗಿಲ್ಲ.
- ಬಲಪ್ರಯೋಗದಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲಾಗಿದೆ ಎಂಬುದು ಪ್ರಾಸಿಕ್ಯೂಷನ್ ವಾದವಲ್ಲ. ತನ್ನನ್ನು ಅಪಹರಿಸಲಾಗಿಲ್ಲ ಎಂದು ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ತಂದೆ ಕಾಶಿನಾಥಯ್ಯ ಮತ್ತು ತಾಯಿಗೆ ಹೇಳಿದ್ದಾನೆ. ಗೆಳೆಯರ ಜತೆ ಊಟಕ್ಕೆ ಹೊರಹೋಗುತ್ತಿದ್ದೇನೆ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲ ಎಂದು ಹೇಳಿದ್ದಾನೆ. ಅದರಂತೆ, ಬಲಪ್ರಯೋಗ ಅಥವಾ ವಂಚನೆಯಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿಲ್ಲ.
- ಜೂನ್ 8ರಂದು ಚಿತ್ರದುರ್ಗದಿಂದ ಬರುವಾಗ ದುರ್ಗಾ ಬಾರ್ಗೆ ರೇಣುಕಾಸ್ವಾಮಿ ಸೇರಿ ನಾಲ್ವರು ಭೇಟಿ ನೀಡುತ್ತಾರೆ. ಈ ಬಾರ್ನ ಉಸ್ತುವಾರಿ ಮಂಜುನಾಥ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇಲ್ಲಿ ಊಟ ಹಾಗೂ ಮದ್ಯ ಸೇವನೆ ಮಾಡಿದ ಬಳಿಕ ರೇಣುಕಾಸ್ವಾಮಿಯೇ ದುರ್ಗಾ ಬಾರ್ನಲ್ಲಿ 640 ರೂ. ಪಾವತಿಸಿದ್ದಾನೆ. ರೇಣುಕಾಸ್ವಾಮಿ ತಂದೆ, ತಾಯಿ ಮತ್ತು ಮಂಜುನಾಥ್ ಹೇಳಿಕೆಯನ್ನು ನೋಡಿದರೆ ಆತನನ್ನು ಕೊಲೆ ಮಾಡಲು ಅಪಹರಿಸಲಾಗಿಲ್ಲ ಎಂಬುದು ತಿಳಿಯುತ್ತದೆ. ಇಲ್ಲಿ ಕೊಲೆ ಮಾಡಿದವರು ಸೆಕ್ಷನ್ 302 ಅಡಿ ಶಿಕ್ಷೆಗೆ ಗುರಿಯಾಗುತ್ತಾರೆಯೇ ಹೊರತು ಸೆಕ್ಷನ್ 364 ಅಡಿ ಅಪಹರಣ ಅಪರಾಧಕ್ಕಲ್ಲ.
- ಐಪಿಸಿ ಸೆಕ್ಷನ್ 201ರ ಅಡಿ ಕೊಲೆಗೆ ಸಂಬಂಧಿಸಿದ ಸಾಕ್ಷ್ಯವನ್ನು ಬಚ್ಚಿಟ್ಟಿದ್ದಾರೆ ಮತ್ತು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೃತದೇಹವನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಿಸುವುದನ್ನು ಸಾಕ್ಷ್ಯನಾಶ ಎನ್ನಲಾಗದು. ಜೂನ್ 9ರಂದು ರೇಣುಕಾಸ್ವಾಮಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಜೂನ್ 10 ಮತ್ತು 11ರಂದು ಏನೂ ಮಾಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಯಾವಾಗ ರೇಣುಕಾಸ್ವಾಮಿ ಸತ್ತಿದ್ದಾರೆ ಎಂದು ಹೇಳಿಲ್ಲ. ಆದರೆ, ಸಾವಿಗೆ ಕಾರಣ ಏನೆಂದು ಹೇಳಿದ್ದಾರೆ.
- ಕೊಲೆ ಮಾಡುವ ಉದ್ದೇಶದಿಂದ ಅಪಹರಣ, ಸಾಕ್ಷ್ಯ ನಾಶ, ಹಲ್ಲೆ ಮತ್ತು ಕೊಲೆ ಆರೋಪ ಮಾಡಲಾಗಿದೆ. ಕೆಲವು ನೇರ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಈ ಆರೋಪ ಮಾಡಲಾಗಿದೆ. ಐಪಿಸಿ ಸೆಕ್ಷನ್ಗಳಾದ 355, 201 ಜಾಮೀನುಸಹಿತ ಅಪರಾಧಗಳಾಗಿವೆ. ಐಪಿಸಿ ಸೆಕ್ಷನ್ 364 ಮತ್ತು 302 ಬಗ್ಗೆ ಮಾತ್ರ ವಾದಿಸಬೇಕಿದೆ. ಈ ಹಂತದಲ್ಲಿ ದರ್ಶನ್ ಆರೋಪಮುಕ್ತಿ ಅಥವಾ ಖುಲಾಸೆ ಕೋರುತ್ತಿಲ್ಲ. ಪ್ರಾಸಿಕ್ಯೂಷನ್ ಸಹ ಶಿಕ್ಷೆಗೆ ವಾದಿಸುತ್ತಿಲ್ಲ. ಲಭ್ಯವಿರುವ ಸಾಕ್ಷ್ಯ ಆಧರಿಸಿ ಯಾವ ಮಟ್ಟಕ್ಕೆ ಆರೋಪಿಯನ್ನು ಎಳೆದು ತರಬಹುದು ಮತ್ತು ಒಂದೊಮ್ಮೆ ಹಾಗಾದರೂ ಅವರು ಜಾಮೀನಿಗೆ ಅರ್ಹರೇ? ಅಲ್ಲವೇ? ಎಂಬುದು ನ್ಯಾಯಾಲಯ ಮುಂದಿರುವ ಪ್ರಶ್ನೆಯಾಗಿದೆ?
- ಜೂನ್ 12ರಂದು ತನಿಖಾಧಿಕಾರಿಗಳು ಹಗ್ಗ, ಎರಡು ಅಡಿ ಉದ್ದದ ಲಾಟಿ, ಮರದ ಕೊಂಬೆಯನ್ನು ಕೊಲೆಗೆ ಬಳಸಿದ ಆಯುಧಗಳೆಂದು ಜಪ್ತಿ ಮಾಡಿದ್ದಾರೆ. ಜೂನ್ 9, 10 ಮತ್ತು 11ರಂದು ಅವುಗಳನ್ನು ವಶಕ್ಕೆ ಪಡೆದಿಲ್ಲ. ಆದರೆ, ಜೂನ್ 9ರಂದೇ ಪಟ್ಟಣಗೆರೆ ಷೆಡ್ ಅನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೂನ್ 10ರಂದು ಆರೋಪಿಗಳನ್ನು ಬಂಧಿಸಿ, ಅವರ ಹೇಳಿಕೆ ದಾಖಲಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯ ತನಿಖಾಧಿಕಾರಿಗೆ ಘಟನಾ ಸ್ಥಳದ ಬಗ್ಗೆ ಜೂನ್ 9ರಂದೇ ತಿಳಿದಿತ್ತು. ಹೀಗಿದ್ದರೂ, ಅವರನ್ನು ಪಂಚನಾಮೆ ಮಾಡದಂತೆ ಯಾರೂ ತಡೆದಿರಲಿಲ್ಲ. ತನಿಖಾಧಿಕಾರಿಯ ಈ ನಡೆ ಒಪ್ಪುವಂಥದಲ್ಲ.
- ಜೂನ್ 9ರಂದು 14ನೇ ಆರೋಪಿಗೆ ಪಿಎಸ್ಐ ವಿನಯ್ ಅವರು ಘಟನಾ ಸ್ಥಳದ ಚಿತ್ರಗಳು ಮತ್ತು ವಿಡಿಯೊ ಕಳುಹಿಸುತ್ತಾರೆ. ಇವರನ್ನು ಸಾಕ್ಷಿಯಾಗಿ ಹೆಚ್ಚುವರಿ ಆರೋಪ ಪಟ್ಟಿ ಮತ್ತು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ದರ್ಶನ್ ಅವರಿಂದ 37.40 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದು, ಅದನ್ನು ಸಾಕ್ಷ್ಯ ನಾಶಕ್ಕೆ ಸಂಗ್ರಹಿಸಿದ್ದರು ಎಂದು ಕತೆ ಹೆಣೆಯಲಾಗಿದೆ. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಕೊಲೆ ಮಾಡಲಾಗುತ್ತದೆ ಎಂದು ಯಾರಿಗೂ ಮಾರ್ಚ್ನಲ್ಲಿ ತಿಳಿದಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ ಎಂದು ಯಾರಿಗೆ ಗೊತ್ತು? ಸುಳ್ಳು ಕತೆ ಹೆಣೆಯಲು ಒಂದು ಮಿತಿ ಇರಬೇಕು. ದರ್ಶನ್ರಿಂದ ಪಡೆದಿದ್ದ ಹಣವನ್ನು ಅವರ ಗೆಳೆಯ ಹಿಂದಿರುಗಿಸಿದ್ದರು ಅಷ್ಟೇ.
- ಕರೆ ದಾಖಲೆ ಬಗ್ಗೆ ಹೇಳುವುದಾದರೆ ಒಟ್ಟು 17 ಮಂದಿಯಲ್ಲಿ ಐದು ಮಂದಿಗೆ ಜಾಮೀನು ದೊರೆತಿದೆ. ಇದರಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದವನಿಗೂ ಜಾಮೀನು ಸಿಕ್ಕಿದೆ. ದರ್ಶನ್ ತಮ್ಮ ಮ್ಯಾನೇಜರ್ ಆರ್. ನಾಗರಾಜು, ಗೆಳತಿ ಪವಿತ್ರಾ ಗೌಡ ಜತೆ ಮಾತನಾಡಿದ್ದಾರೆ. ಇದೇನು ಮೊದಲ ಬಾರಿಗೆ ಮ್ಯಾನೇಜರ್ ಮತ್ತು ಗೆಳತಿಗೆ ದರ್ಶನ್ ಕರೆ ಮಾಡಿಲ್ಲ. ಜೂನ್ 8ರಂದು ದರ್ಶನ್ ಅವರು ಆರೋಪಿ ವಿನಯ್ ಮಾಲೀಕತ್ವದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ಗೆ ನಟ ಚಿಕ್ಕಣ್ಣ, ನವೀನ್, ಯಶಸ್ ಸೂರ್ಯ, ಪ್ರದೋಷ್ ಮತ್ತಿತರರನ್ನು ಆಹ್ವಾನಿಸಿದ್ದರು. ಇಲ್ಲಿ ಎಲ್ಲರೂ ಸೇರಿ ಸಿನಿಮಾ ಬಗ್ಗೆ ಮಾತನಾಡಿ ಊಟ ಮಾಡಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ನಟ ಚಿಕ್ಕಣ್ಣ ಮತ್ತು ನವೀನ್ ಅವರು ಪವನ್ ಎಂಬಾತನ ಜತೆ ದರ್ಶನ್ ಮಾತನಾಡಿದ್ದರು. ಆದರೆ, ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಹೀಗಿರುವಾಗ, ಇಲ್ಲಿ ಯಾವ ಪಿತೂರಿ ನಡೆದಿದೆ?
ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ.
Related Articles
Thank you for your comment. It is awaiting moderation.
Comments (0)