ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಎಚ್ಡಿಕೆಗೆ ರಿಲೀಫ್; ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶ
- by Jagan Ramesh
- November 6, 2024
- 224 Views
ಬೆಂಗಳೂರು: ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವಿಶೇಷ ಪೊಲೀಸ್ ತನಿಖಾ ದಳದ (ಎಸ್ಐಟಿ) ಮುಖ್ಯಸ್ಥ ಎಂ. ಚಂದ್ರಶೇಖರ್ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್ಐಆರ್ ಸಂಬಂಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಎಡಿಜಿಪಿ ಎಂ. ಚಂದ್ರಶೇಖರ್ ಅವರ ದೂರು ಆಧರಿಸಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಎಚ್. ಡಿ. ಕುಮಾರಸ್ವಾಮಿ ಮತ್ತವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಶಾಸಕ ಸುರೇಶ್ ಬಾಬು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು.
ಇದೇ ವೇಳೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದಶಕದ ಹಿಂದೆ ಕುಮಾರಸ್ವಾಮಿ ಅವರಿಗೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ರದ್ದತಿಯ ವಿಚಾರದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಆದೇಶಿಸಿದ ನ್ಯಾಯಾಲಯ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಹಾಗೂ ದೂರುದಾರರಾದ ಎಂ. ಚಂದ್ರಶೇಖರ್ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿತು.
ಅರ್ಜಿದಾರರ ವಾದವೇನು?
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿ, ನಾನ್ ಕಾಗ್ನಿಜಬಲ್ (ಸಂಜ್ಞೇರಹಿತ) ಅಪರಾಧವನ್ನು ಎಫ್ಐಆರ್ ಮಾಡಲು ಮ್ಯಾಜಿಸ್ಟ್ರೇಟ್ ಅನುಮತಿಸಿದ್ದಾರೆ. ಈಗ ಅದು ಕಾಗ್ನಿಜಬಲ್ (ಸಂಜ್ಞೇ) ಅಪರಾಧವಾಗುತ್ತದೆ. ಇದರ ಆಧಾರದಲ್ಲಿ ಅರ್ಜಿದಾರರಿಗೆ ಸಂಬಂಧಪಟ್ಟ ಸ್ಥಳಗಳಲ್ಲಿ ತನಿಖಾಧಿಕಾರಿ ಶೋಧ ಮತ್ತು ಜಪ್ತಿ ಮಾಡಲು ಅಧಿಕಾರ ದೊರೆಯುತ್ತದೆ. ಈ ಕಾರಣಕ್ಕಾಗಿ ಎಫ್ಐಆರ್ಗೆ ತಡೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಚಂದ್ರಶೇಖರ್ ಅವರು ಅಕ್ಟೋಬರ್ 11ರಂದು ಸಂಜಯನಗರ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ. ಅಕ್ಟೋಬರ್ 21ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದಶಕದ ಹಿಂದೆ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ರದ್ದತಿಗೆ ಲೋಕಾಯುಕ್ತ ಎಸ್ಐಟಿ ಕಡೆಯಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇಂದು ವಿಚಾರಣಾ ನ್ಯಾಯಾಲಯದಲ್ಲಿ ಆ ಅರ್ಜಿ ವಿಚಾರಣೆ ನಡೆದಿದೆ. ನಿನ್ನೆ ಮ್ಯಾಜಿಸ್ಟ್ರೇಟ್ ಆದೇಶ ಪಡೆದು, ತಕ್ಷಣ ಸಂಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಆದ್ದರಿಂದ, ಇಂದು ನ್ಯಾಯಾಲಯದ ಮುಂದೆ ಬಂದಿದ್ದೇವೆ ಎಂದು ವಿವರಿಸಿದರು.
ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಂತ ಕ್ರಮಕೈಗೊಳ್ಳುವುದಿಲ್ಲ. ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ರದ್ದತಿ ಕೋರಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು. ಈ ನಡುವೆ, ಹಷ್ಮತ್ ಪಾಷಾ ಅವರು ಪ್ರಕರಣಕ್ಕೆ ತಡೆ ನೀಡಬೇಕು ಎಂದು ಒತ್ತಿ ಹೇಳಿದಾಗ ನ್ಯಾಯಪೀಠ, ಕುಮಾರಸ್ವಾಮಿ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಅವರ ವಿರುದ್ಧದ ಸರ್ಕಾರಿ ಅಧಿಕಾರಿಗೆ ಬೆದರಿಕೆ ಪ್ರಕರಣವನ್ನು ತಡೆ ಮಾಡಲಾಗದು. ರಾಜ್ಯ ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದೆಯಲ್ಲಾ? ರಾಜ್ಯ ಸರ್ಕಾರ ಮುಚ್ಚಳಿಕೆ ವಿರುದ್ಧವಾಗಿ ಬಲವಂತದ ಕ್ರಮಕೈಗೊಂಡರೆ ನೀವು ನ್ಯಾಯಾಲಯದ ಮುಂದೆ ಬರಬಹುದು ಎಂದು ಮೌಖಿಕವಾಗಿ ಹೇಳಿತು.
ಹೈಕೋರ್ಟ್ ಆದೇಶ:
ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮಕೈಗೊಳ್ಳುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅಲ್ಲದೇ, ಈ ಪ್ರಕರಣ ಆಧರಿಸಿ ಕುಮಾರಸ್ವಾಮಿ ಅವರಿಗೆ ದಶಕದ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆ ಮಾಡಲಾಗದು ಮತ್ತು ಮಾಡಬಾರದು. ಈಗಾಗಲೇ ನಿರೀಕ್ಷಣಾ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಕೆ ಮಾಡಿದ್ದರೆ, ಅದರ ಸಂಬಂಧ ಯಾವುದೇ ಕ್ರಮಕೈಗೊಳ್ಳದಂತೆ ಲೋಕಾಯುಕ್ತ ಎಸ್ಐಟಿಯನ್ನು ನಿರ್ಬಂಧಿಸಲಾಗಿದೆ. ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರ ಬಲವಂತದ ಕ್ರಮಕೈಗೊಂಡರೆ ಅರ್ಜಿದಾರರು ನ್ಯಾಯಾಲಯದ ಮುಂದೆ ಬರುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
Related Articles
Thank you for your comment. It is awaiting moderation.
Comments (0)