ಪ್ರತ್ಯೇಕ ರಾಷ್ಟ್ರೀಯ ದಿನ ಆಚರಿಸಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್
- by Jagan Ramesh
- October 7, 2024
- 74 Views
ಬೆಂಗಳೂರು: ಬ್ರಿಟಿಷರು ಬಳುವಳಿಯಾಗಿ ಕೊಟ್ಟು ಹೋಗಿರುವ ದಿನದಂದು ಸ್ವಾತಂತ್ರ್ಯ ದಿನ ಆಚರಿಸುವ ಬದಲು ಪ್ರತ್ಯೇಕವಾಗಿ ನಮ್ಮದೇ ಆದ ರಾಷ್ಟ್ರೀಯ ದಿನ ಆಚರಿಸಲು ಹಾಗೂ ಭೂಮಿ ಚಲಿಸುವ ನಾಲ್ಕು ದಿಕ್ಕುಗಳನ್ನು ಆಧರಿಸಿ ವರ್ಷದಲ್ಲಿ ನಾಲ್ಕು ಹೆಚ್ಚುವರಿ ರಾಷ್ಟ್ರೀಯ ದಿನಗಳನ್ನಾಗಿ ಆಚರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ವಕೀಲ ಎಂ.ಎಸ್. ಚಂದ್ರಶೇಖರಬಾಬು ಹಾಗೂ ಕಲಾವಿದ ಮತ್ತು ಖಗೋಳಶಾಸ್ತ್ರಜ್ಞ ಜಿ. ರವೀಂದ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.
ಅರ್ಜಿಯಲ್ಲಿನ ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಅರ್ಜಿದಾರರನ್ನು ಕುರಿತು ಭೂಮಿ ನಾಲ್ಕು ದಿಕ್ಕಿನಲ್ಲಿ ಚಲಿಸುತ್ತಿದೆ ಎಂದು ಹೇಳಿದ್ದೀರಿ, ನೀವು 5ನೇ ದಿಕ್ಕಿನಲ್ಲಿ ಚಲಿಸುತ್ತಿದ್ದೀರಿ ಎಂದು ಮಾರ್ಮಿಕವಾಗಿ ನುಡಿಯಿತಲ್ಲದೆ, ಇಂತಹ ಅರ್ಜಿಗಳಿಗೆ ನೀವು ಹಾಜರಾಗಬೇಕಾಯಿತು ನೋಡಿ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರನ್ನು ಕುರಿತು ನ್ಯಾಯಪೀಠ ಹೇಳಿತು.
ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಯನ್ನು ವಾಪಸ್ ಪಡೆಯಿರಿ, ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ಹಾಕಿ ಅರ್ಜಿಯನ್ನು ವಜಾಗೊಳಿಸಲಾಗುವುದು. ಆಯ್ಕೆ ನಿಮ್ಮ ಮುಂದಿದೆ ಎಂದು ಅರ್ಜಿದಾರರಿಗೆ ಹೇಳಿತು. ಅರ್ಜಿ ಹಿಂಪಡೆದು ಕೊಳ್ಳುವುದಾಗಿ ಅರ್ಜಿದಾರರು ಹೇಳಿದರು. ಅದನ್ನು ಪರಿಗಣಿಸಿದ ಪೀಠ ಪಿಐಎಲ್ ವಜಾಗೊಳಿಸಿ ಆದೇಶಿಸಿತು.
ಅರ್ಜಿದಾರರ ಮನವಿ:
ನಮ್ಮ ದೇಶಕ್ಕೆ 2 ರಿಂದ 3 ಲಕ್ಷ ವರ್ಷಗಳ ಸುದೀರ್ಘ ಇತಿಹಾಸವಿದೆ. ಬ್ರಿಟಿಷರು ಇಲ್ಲಿಗೆ ಬಂದು ಆಳ್ವಿಕೆ ನಡೆಸಿ ಹೋಗಿದ್ದಾರೆ. ಅವರು ಹೇಳಿದ ದಿನಾಂಕದದ್ದು ಸ್ವಾತಂತ್ರ್ಯ ದಿನ ಆಚರಿಸುವುದು ಸರಿಯಲ್ಲ. ಅದರ ಬದಲಿಗೆ ನಮ್ಮದೇ ಆದ ಪ್ರತ್ಯೇಕ ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು. ಸ್ವಾತಂತ್ರ್ಯ ದಿನಾಚರಣೆ ದಿನವನ್ನು ಮರುಪರಿಗಣಿಸಬೇಕು. ಈ ಕುರಿತು ಭಾರತವಷ್ಟೇ ಅಲ್ಲ ಬ್ರಿಟಿಷ್, ಫ್ರೆಂಚ್ ಹಾಗೂ ಡಚ್ಚರ ಆಳ್ವಿಕೆಯಲ್ಲಿದ್ದ 132 ದೇಶಗಳಿಗೂ ಮನವಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಭಾರತವು ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿದೆ. ಉತ್ತರದಲ್ಲಿ ಹಿಮಾಲಯ, ದಕ್ಷಿಣದಲ್ಲಿ ಹಿಂದು ಮಹಾಸಗರ, ಪೂರ್ವದಲ್ಲಿ ದಟ್ಟ ಅರಣ್ಯ, ಪಶ್ಚಿಮದಲ್ಲಿ ಮರುಭೂಮಿ ಹೊಂದಿದೆ. ಸೌರ ವ್ಯವಸ್ಥೆಯಲ್ಲಿ ವರ್ಷದಲ್ಲಿ ನಾಲ್ಕು ಋತುಗಳು ಬರಲಿದ್ದು, ಅವುಗಳನ್ನು ಆಧರಿಸಿ ಮಾರ್ಚ್ 20-21ರಂದು ರಾಷ್ಟ್ರೀಯ ಭೂಮಿ ದಿನ, ಜೂನ್ 20-21ರಂದು ಪ್ರಾಚೀನ ಭಾರತೀಯರ ರಾಷ್ಟ್ರೀಯ ದಿನ, ಸೆಪ್ಟೆಂಬರ್ 22-23 ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ, ಡಿಸೆಂಬರ್ 21-22 ವಿಶ್ವ ವಿಜ್ಞಾನಿಗಳ ದಿನಾಚರಣೆ ಹೆಸರಲ್ಲಿ ಪ್ರತ್ಯೇಕ ರಾಷ್ಟ್ರೀಯ ದಿನಗಳನ್ನು ಆಚರಿಸಬೇಕು. ಇದರಿಂದ, ದೇಶಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ಒಳ್ಳೆಯದಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.
Comments (0)