ಯೆಮನ್‌ನ ಹೊದೈದಾ ಮೇಲೆ ಸೌದಿ ವೈಮಾನಿಕ ದಾಳಿ; 17 ಮಂದಿ ಸಾವು, 11 ಜನರಿಗೆ ಗಾಯ

ಹೊದೈದಾ: ಯೆಮನ್‌ನ ಹೊದೈದಾ ಬಂದರು ನಗರದಲ್ಲಿ ದೂರಸಂಪರ್ಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಸೋಮವಾರ ಮುಂಜಾನೆ ನಡೆದ ವೈಮಾನಿಕ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ ಎಂದು ಹೌತಿ ನಿಯಂತ್ರಿತ ಅಲ್-ಮಸೀರಾ ಟಿವಿ ವರದಿ ಮಾಡಿದೆ.

ಮೃತರೆಲ್ಲರೂ ಕಾರ್ಮಿಕರು ಎಂದು ಹೌತಿ ದೂರಸಂಪರ್ಕ ಇಲಾಖೆ ತಿಳಿಸಿದೆ. ಸೌದಿ ಯುದ್ಧವಿಮಾನಗಳು ದಾಳಿ ನಡೆಸಿವೆ ಎಂದು ಆರೋಪಿಸಿರುವ ಇಲಾಖೆ, ದೂರಸಂಪರ್ಕ ಕೇಂದ್ರಗಳು, ಸಿಬ್ಬಂದಿ ವಸತಿ ಕಟ್ಟಡಗಳು, ಮಸೀದಿ ಮತ್ತು ಸಂವಹನ ಗೋಪುರ ಧ್ವಂಸಗೊಂಡಿವೆ ಎಂದು ಹೇಳಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ದೂರವಾಣಿ ಮತ್ತು ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ.

ದಾಳಿಯಲ್ಲಿ ಅಮೆರಿಕ ನಿರ್ಮಿತ GBU-31 ಬಾಂಬ್‌ಗಳನ್ನು ಬಳಸಲಾಗಿದೆ ಎಂದೂ ಅಲ್-ಮಸೀರಾ ಆರೋಪಿಸಿದೆ. ಯುದ್ಧವಿಮಾನಗಳ ಹಾರಾಟದಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

2014ರಲ್ಲಿ ಹೌತಿಗಳು ಸನಾ ವಶಪಡಿಸಿಕೊಂಡ ಬಳಿಕ ಯೆಮನ್‌ನಲ್ಲಿ ಅಂತರ್ಯುದ್ಧ ಆರಂಭವಾಗಿದ್ದು, 2015ರಲ್ಲಿ ಸೌದಿ ನೇತೃತ್ವದ ಮೈತ್ರಿಕೂಟ ಸೇನಾ ಹಸ್ತಕ್ಷೇಪ ನಡೆಸಿತ್ತು.

Related Articles

Comments (0)