ಟ್ರಂಪ್ ಹತ್ಯೆಗೆ ಸಂಚು: ಪಾಕಿಸ್ತಾನಿ ಪ್ರಜೆಗೆ 27 ವರ್ಷ 6 ತಿಂಗಳ ಜೈಲು
- by Legal Samachar
- November 19, 2026
- 5 Views
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪಾಕಿಸ್ತಾನಿ ಪ್ರಜೆ ಆಸಿಫ್ ಮರ್ಚೆಂಟ್ಗೆ 27 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನ್ಯೂಯಾರ್ಕ್ನ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಎರಿಕ್ ರಾಸ್ ಕೊಮಿಟಿ ತೀರ್ಪು ಪ್ರಕಟಿಸಿದ್ದಾರೆ.
2020ರಲ್ಲಿ ಅಮೆರಿಕದ ದಾಳಿಯಲ್ಲಿ ಇರಾನ್ ಸೇನಾ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆಯಾದುದಕ್ಕೆ ಪ್ರತೀಕಾರವಾಗಿ ಸಂಚು ರೂಪಿಸಿದ್ದಾಗಿ ಆಸಿಫ್ ಒಪ್ಪಿಕೊಂಡಿದ್ದಾನೆ. ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ನಿರ್ದೇಶನದಂತೆ ಕಾರ್ಯನಿರ್ವಹಿಸಿದ್ದಾಗಿ ತಿಳಿಸಿದ್ದಾನೆ.

ಬಾಡಿಗೆ ಹಂತಕರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದ ಆತ, ಆರಂಭಿಕ ಪಾವತಿಯಾಗಿ 5,000 ಡಾಲರ್ ನೀಡಿದ್ದ. ಆದರೆ ಸಂಪರ್ಕಿಸಿದ ವ್ಯಕ್ತಿಗಳು ಎಫ್ಬಿಐ ರಹಸ್ಯ ಏಜೆಂಟರಾಗಿದ್ದರಿಂದ ಸಂಚು ವಿಫಲವಾಗಿತ್ತು.
ಪ್ರಾಸಿಕ್ಯೂಟರ್ಗಳ ಪ್ರಕಾರ, ಆಸಿಫ್ 15 ಬಾರಿ ಇರಾನ್ಗೆ ಪ್ರಯಾಣಿಸಿದ್ದು, ಅಲ್ಲಿನ ಗುಪ್ತಚರ ಅಧಿಕಾರಿಗಳಿಂದ ತರಬೇತಿ ಪಡೆದಿದ್ದ. 2024ರ ಜುಲೈನಲ್ಲಿ ಟೆಕ್ಸಾಸ್ನಲ್ಲಿ ಆತನನ್ನು ಬಂಧಿಸಲಾಗಿತ್ತು.


Comments (0)