ಬೆಂವಿವಿ ನಾಮನಿರ್ದೇಶಿತ ಸಿಂಡಿಕೇಟ್ ಸದಸ್ಯರ ಕಾರ್ಯನಿರ್ವಹಣೆ ಬೇಡ; ಹೈಕೋರ್ಟ್ ಮೌಖಿಕ ಸೂಚನೆ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯಗಳಿಗೆ ನಾಮನಿರ್ದೇಶನಗೊಂಡಿರುವ 9 ಸಿಂಡಿಕೇಟ್‌ ಸದಸ್ಯರಿಗೆ ಆ ಸ್ಥಾನದಲ್ಲಿ ಕಾರ್ಯ ನಿರ್ವಹಣೆ ಮಾಡದಂತೆ ಹೈಕೋರ್ಟ್‌ ಮೌಖಿಕ ಸೂಚನೆ ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಿಗೆ 9 ಸಿಂಡಿಕೇಟ್‌ ಸದಸ್ಯರ ನಾಮ ನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆಗಸ್ಟ್ 27ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಶಿಕ್ಷಣ ತಜ್ಞರಾದ ಡಾ.ಪಿ.ಬಿ. ಜಯಕೃಷ್ಣ, ಕೆ.ರಾಮಮೂರ್ತಿ, ಆರ್‌ಎಸ್‌ಎನ್‌ ಪ್ರಸಾದ್‌ ಮತ್ತು ಡಾ.ಎಂ. ಚಿಕ್ಕಮುನಿಯಪ್ಪ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯು ಇತ್ತೀಚೆಗೆ ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಹಾಜರಾಗಿ, ಖಾಸಗಿ ವ್ಯಕ್ತಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ಸ್ಥಾನಕ್ಕೆ ಯಾವ ಮಾನದಂಡ ಮತ್ತು ಆಧಾರದಲ್ಲಿ ನಾಮನಿರ್ದೇಶನ ಮಾಡಲಾಗಿದೆ ಎಂಬ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಕೋರಿದರು.

ಆ ಮನವಿ ಪರಿಗಣಿಸಿದ ಪೀಠ, ವಿಚಾರಣೆಯನ್ನು ಸೆಪ್ಟಂಬರ್ 4ಕ್ಕೆ ಮುಂದೂಡಿತು. ಇದೇ ವೇಳೆ, ಸರ್ಕಾರದ ಅಧಿಸೂಚನೆ ಪರಿಶೀಲಿಸಿದಾಗ ಪ್ರತಿವಾದಿ ಬೆಂಗಳೂರು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಹಾಗೂ ಪಠ್ಯಕ್ರಮದ ವಿಷಯಗಳಿಗೆ ಸಂಬಂಧಪಡದ ವಿದ್ಯಾರ್ಹತೆ ಹೊಂದಿರುವ ವ್ಯಕ್ತಿಗಳನ್ನು ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ ಎಂಬುದು ಕಂಡುಬರುತ್ತಿದೆ. ಆದ್ದರಿಂದ, ನಾಮ ನಿರ್ದೇಶನಗೊಂಡಿರುವ ಸಿಂಡಿಕೇಟ್ ಸದಸ್ಯರು ತಮ್ಮ ಸ್ಥಾನದಲ್ಲಿ ಕಾರ್ಯನಿರ್ವಹಿಸಬಾರದು ಎಂದು ನ್ಯಾಯಾಲಯ ಮೌಖಿಕ ನಿರ್ದೇಶನ ನೀಡಿದೆ.

ಪ್ರಕರಣವೇನು?
ಡಾ.ಜಯಶ್ರೀ ಹೆಗ್ಡೆ, ಎಂ.ಎ. ಮಹದೇವ ನಾಯ್ಕ, ರಮೇಶ್‌ ಬಾಬು, ಆಯೇಷಾ ಫರ್ಜಾನಾ, ವಿ.ಶಿವಕುಮಾರ್‌, ಎಸ್‌.ಆರ್‌. ಸಹನಾ, ಜೈದೀಪ್‌, ಅರ್ಬಾಜ್‌ ಪಾಷಾ ಮತ್ತು ಎಂ.ಗೋಪಾಲ ಗೌಡ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ನಗರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಸದಸ್ಯರ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿ ರಾಜ್ಯ ಉನ್ನತ ಶಿಕ್ಷಣ (ವಿಶ್ವವಿದ್ಯಾಲಯಗಳು-2) ಇಲಾಖೆಯ ಅಧೀನ ಕಾರ್ಯದರ್ಶಿ 2024ರ ಆಗಸ್ಟ್ 27ರಂದು ಅಧಿಸೂಚನೆ ಹೊರಡಿಸಿದ್ದರು.

ಈ ಅಧಿಸೂಚನೆಯನ್ನು ಪ್ರಶ್ನಿಸಿರುವ ಅರ್ಜಿದಾರರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿ ಹೇಳಿರುವಂತೆ ನಾಮನಿರ್ದೇಶನಗೊಂಡಿರುವವರು ಶಿಕ್ಷಣ ತಜ್ಞರಲ್ಲ. ಅವರು ಸಿಂಡಿಕೇಟ್‌ ಸದಸ್ಯರಾಗಲು ನಿಗದಿತ ಅರ್ಹತೆ ಹೊಂದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣಿತಿ ಹೊಂದಿಲ್ಲ. ವಿಶ್ವವಿದ್ಯಾಲಯಗಳಿಗೆ ಯಾವುದೇ ರೀತಿಯ ಕೊಡುಗೆ ನೀಡಿಲ್ಲ. ಅವರನ್ನು ನಾಮನಿರ್ದೇಶನ ಮಾಡಿರುವುದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ ಸೆಕ್ಷನ್ 28(1)(ಜಿ) ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದ್ದಾರೆ. ಜತೆಗೆ, ಅರ್ಜಿ ಇತ್ಯರ್ಥವಾಗುವರೆಗೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

Related Articles

Comments (0)

Leave a Comment