ಯೋಗೀಶಗೌಡ ಗೌಡರ್ ಹತ್ಯೆ ಪ್ರಕರಣ; ಮರು ವಿಚಾರಣೆಗೆ ಆಕ್ಷೇಪಿಸಿ ಆರೋಪಿಗಳು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
- by Jagan Ramesh
- September 2, 2024
- 52 Views
ಬೆಂಗಳೂರು: ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣ ಸಂಬಂಧ ಹೊಸದಾಗಿ ವಿಚಾರಣೆ ನಡೆಸಲು ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯೋಗೀಶಗೌಡ ಗೌಡರ್ ಕೊಲೆ ಪ್ರಕರಣದ 6 ಆರೋಪಿಗಳು ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಶನಿವಾರ ಪ್ರಕಟಿಸಿದ್ದು, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.
ಹೈಕೋರ್ಟ್ನ ಈ ಆದೇಶದಿಂದಾಗಿ ಆರೋಪಿಗಳಾದ ವಿಕ್ರಂ ಬಳ್ಳಾರಿ, ಕೀರ್ತಿಕುಮಾರ ಬಸವರಾಜ ಕುರಹಟ್ಟಿ, ಸಂದೀಪ್ ಸೌದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್ ಅಲಿಯಾಸ್ ಮುದುಕ ಹಾಗೂ ಬಸವರಾಜ ಮುತ್ತಗಿ ಸಿಬಿಐ ನ್ಯಾಯಾಲಯದಲ್ಲಿ ಹೊಸದಾಗಿ ವಿಚಾರಣೆ ಎದುರಿಸಬೇಕಾಗಿದೆ. ಹೈಕೋರ್ಟ್ ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂ.15ರಂದು ಯೋಗೀಶ ಗೌಡರ್ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಮೊದಲಿಗೆ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು 6 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಶಾಸಕ ವಿನಯ ಕುಲಕರ್ಣಿ ಹೆಸರು ಕೈಬಿಡಲಾಗಿತ್ತು. ನಂತರ ಸಿಬಿಐ ತನಿಖೆ ನಡೆಸಿ, ದೋಷಾರೋಪ ಪಟ್ಟಿಯಲ್ಲಿ ಹೊಸದಾಗಿ 7ರಿಂದ 21 ಆರೋಪಿಗಳನ್ನು ಸೇರ್ಪಡೆ ಮಾಡಿತ್ತು.
ಹೊಸ ಆರೋಪಿಗಳು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಪ್ರಕರಣದ ಮರು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯ 2024ರ ಜೂ.28ರಂದು ಆದೇಶಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ, ಹೊಸದಾಗಿ ವಿಚಾರಣೆ ನಡೆಸುವುದರಿಂದ ಕಾನೂನು ತೊಡಕು ಉಂಟಾಗಲಿದೆ. ವಿಚಾರಣೆ ಸಹ ವಿಳಂಬವಾಗುತ್ತದೆ. ಆದ್ದರಿಂದ, ಹೊಸ ಆರೋಪಿಗಳು ಸೇರ್ಪಡೆಯಾದಾಗ ಪ್ರಕರಣ ಯಾವ ಹಂತದಲ್ಲಿತ್ತೋ, ಅಲ್ಲಿಂದಲೇ ವಿಚಾರಣೆ ಮುಂದುವರಿಸಲು ವಿಶೇಷ ನ್ಯಾಯಾಲಯಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)