ಹೈಕೋರ್ಟ್ನಲ್ಲಿಂದು ಅಂತಿಮ ಹಂತದ ವಿಚಾರಣೆ; ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಲ್ಲಿಸಿರುವ ಅರ್ಜಿ
- by Jagan Ramesh
- September 2, 2024
- 92 Views
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿರುವ ಆದೇಶ ರದ್ದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ಅಂತಿಮ ಹಂತದ ವಿಚಾರಣೆ ಹೈಕೋರ್ಟ್ನಲ್ಲಿಂದು ನಡೆಯಲಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಆದೇಶ ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಅರ್ಜಿದಾರರಾದ ಸಿದ್ದರಾಮಯ್ಯ ಹಾಗೂ ಪ್ರತಿವಾದಿಗಳಾಗಿರುವ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಮೂವರು ಖಾಸಗಿ ದೂರುದಾರರ ಪರ ವಕೀಲರ ವಾದ-ಪ್ರತಿವಾದ ಭಾಗಶಃ ಪೂರ್ಣಗೊಂಡಿದೆ. ಅಂತಿಮ ಹಂತದ ವಿಚಾರಣೆ ಮಾತ್ರ ಬಾಕಿ ಉಳಿದಿದ್ದು, ಒಂದೊಮ್ಮೆ ಸೋಮವಾರವೇ ವಾದ-ಪ್ರತಿವಾದ ಪೂರ್ಣಗೊಂಡರೆ, ನ್ಯಾಯಾಲಯ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿಗಳ ಪರ ಸುಪ್ರಿಂಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದು, ರಾಜ್ಯಪಾಲರ ಕಚೇರಿಯ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿ ದೂರುದಾರ ಟಿ.ಜೆ. ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ, ಎಸ್.ಪಿ. ಪ್ರದೀಪ್ ಕುಮಾರ್ ಪರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಪ್ರತಿವಾದ ಮಂಡಿಸಿದ್ದಾರೆ.
ಮತ್ತೋರ್ವ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ಸುಪ್ರೀಂಕೋರ್ಟ್ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಶನಿವಾರ ಪ್ರತಿವಾದ ಪೂರ್ಣಗೊಳಿಸಿದ್ದು, ಮತ್ತೊಬ್ಬ ಹಿರಿಯ ವಕೀಲರ ವಾದ ಮಂಡನೆ ಬಾಕಿ ಉಳಿದಿದೆ. ಅವರು ಸೋಮವಾರ ಮಧ್ಯಾಹ್ನ ತಮ್ಮ ಪ್ರತಿವಾದ ಮಂಡಿಸಲಿದ್ದಾರೆ.
ಇದಾದ ಬಳಿಕ ಎಲ್ಲ ಪ್ರತಿವಾದಿಗಳ ಪ್ರತಿವಾದಕ್ಕೆ ಮುಖ್ಯಮಂತ್ರಿಗಳ ಪರ ವಕೀಲರು ಉತ್ತರ ನೀಡಿ ವಾದ ಮಂಡಿಸಲಿದ್ದಾರೆ. ಅವರೂ ಸಹ ಸೋಮವಾರವೇ ವಾದ ಪೂರ್ಣಗೊಳಿಸಿದರೆ, ನ್ಯಾಯಪೀಠ ತೀರ್ಪು ಕಾಯ್ದಿರಿಸುವ ಸಾಧ್ಯತೆಯಿದೆ.
Related Articles
Thank you for your comment. It is awaiting moderation.
Comments (0)