ಮುಡಾ ಹಗರಣದ ವಿಚಾರಣೆ ಆ.31ಕ್ಕೆ ಮುಂದೂಡಿದ ಹೈಕೋರ್ಟ್; ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿರುವ ಅರ್ಜಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿರುವ ಹೈಕೋರ್ಟ್, ಸಿಎಂ ವಿರುದ್ಧದ ಖಾಸಗಿ ದೂರಿನ ಸಂಬಂಧ ಯಾವುದೇ ಆತುರದ ಕ್ರಮ ಕೈಗೊಳ್ಳದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿ ಆಗಸ್ಟ್ 19ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನೂ ವಿಸ್ತರಿಸಿದೆ.

ಟಿ.ಜೆ ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಎಸ್.ಪಿ. ಪ್ರದೀಪ್ ಕುಮಾರ್ ಅವರ ಅರ್ಜಿ ಆಧರಿಸಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು.

ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ಸುದೀರ್ಘ ವಾದ ಆಲಿಸಿದ ಪೀಠ, ರಾಜ್ಯಪಾಲರ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ದೂರುದಾರರ ಪರ ವಕೀಲರ ವಾದ ಮಂಡನೆಗಾಗಿ ಅರ್ಜಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಆಗಸ್ಟ್ 19ರಂದು ಹೊರಡಿಸಿರುವ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ನ್ಯಾಯಪೀಠ ತಿಳಿಸಿತು.

ಸಿದ್ದರಾಮಯ್ಯ ಪರ ವಕೀಲರ ವಾದ:
ವಿಚಾರಣೆ ವೇಳೆ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ಅರ್ಜಿಯಲ್ಲಿ 3ನೇ ಪ್ರತಿವಾದಿಯಾಗಿರುವ ದೂರುದಾರ ಟಿ.ಜೆ. ಅಬ್ರಹಾಂ ಅವರು ತಮ್ಮ ಪ್ರಮಾಣಪತ್ರದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅನುಸಾರ ಪೂರ್ವಾನುಮತಿ ಬೇಕಿಲ್ಲ ಎಂದಿದ್ದಾರೆ. ಮತ್ತೊಬ್ಬ ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಅನುಮತಿ ಕೋರಿರುವ ವಿಚಾರವನ್ನು ನಮ್ಮ ಗಮನಕ್ಕೆ ತರಲಾಗಿಲ್ಲ. ಜತೆಗೆ, ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ಸೂಕ್ತ ರೀತಿಯಲ್ಲಿ ತೀರ್ಮಾನ ಕೈಗೊಂಡಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿ ರಾಜ್ಯಪಾಲರು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್‌ ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದ್ದು, ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಕೆಯಾಗಿರುವ ಮನವಿಗಳು ರಾಜ್ಯಪಾಲರ ಮುಂದೆ ಬಹುಕಾಲದಿಂದ ಬಾಕಿ ಉಳಿದಿವೆ. ಅವುಗಳ ವಿಚಾರದಲ್ಲಿ ರಾಜ್ಯಪಾಲರು ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ, ಶೋಕಾಸ್ ನೋಟಿಸ್ ಗೆ ಸಿದ್ದರಾಮಯ್ಯ ಅವರು ನೀಡಿದ ಪ್ರತಿಕ್ರಿಯೆ ಹಾಗೂ ಸಚಿವ ಸಂಪುಟದ ನಿರ್ಣಯದ ಹೊರತಾಗಿಯೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಯಾವ ಕಾನೂನಾತ್ಮಕ ಅಂಶಗಳನ್ನೂ ಪರಿಗಣಿಸದೆ, ಸಚಿವ ಸಂಪುಟದ ತೀರ್ಮಾನಕ್ಕೆ ತಾವು ಬದ್ಧರಾಗಿರಬೇಕಿಲ್ಲ ಎಂದಷ್ಟೇ ಅನುಮತಿ ಆದೇಶದಲ್ಲಿ ಹೇಳಿದ್ದಾರೆ. ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ‌ ಬಳಸಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಸಹಜ ನ್ಯಾಯದ ಉಲ್ಲಂಘನೆ:
ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಅಬ್ರಹಾಂ ನಂತರ ಖಾಸಗಿ ದೂರು ದಾಖಲಿಸುವುದಕ್ಕೂ ಮುನ್ನ ರಾಜ್ಯಪಾಲರಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದಾರೆ. ಅಬ್ರಹಾಂ ಅವರ ಅರ್ಜಿ ಆಧರಿಸಿ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿದ್ದು, ಅದಕ್ಕೆ ಸಿಎಂ ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದಾರೆ. ಆದರೆ, ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ಆದೇಶದಲ್ಲಿ ಅಬ್ರಹಾಂ ಜತೆಗೆ ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್‌ ಕುಮಾರ್‌ ಅವರ ಅರ್ಜಿಗಳನ್ನೂ ಉಲ್ಲೇಖಿಸಿ ಅನುಮತಿ ನೀಡಿದ್ದಾರೆ. ಆದರೆ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಕುಮಾರ್‌ ಅವರು ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ವಿಚಾರವನ್ನು ಶೋಕಾಸ್‌ ನೋಟಿಸ್‌‌ನಲ್ಲಿ ತಿಳಿಸಿಯೇ ಇಲ್ಲ. ಈ ಮೂಲಕ ರಾಜ್ಯಪಾಲರು ಸಹಜ ನ್ಯಾಯದ ತತ್ವವನ್ನು ಉಲ್ಲಂಘಿಸಿದ್ದಾರೆ ಎಂದು ಸಿಂಘ್ವಿ ಆಕ್ಷೇಪಿಸಿದರು.

Related Articles

Comments (0)

Leave a Comment