ಡಿಸಿಎಂ ಡಿ.ಕೆ. ಶಿವಕುಮಾರ್ ಸದ್ಯಕ್ಕೆ ನಿರಾಳ; ಸಿಬಿಐ ತನಿಖೆ ಅನುಮತಿ ಹಿಂಪಡೆದ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾ
- by Jagan Ramesh
- August 29, 2024
- 370 Views
ಬೆಂಗಳೂರು: ಆದಾಯ ಮೀರಿದ ಆಸ್ತಿಗಳಿಕೆ ಆರೋಪ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್, ಪ್ರಕರಣವನ್ನು ಸುಪ್ರೀಂಕೋರ್ಟ್ ನಿರ್ಧರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಇದರಿಂದ, ಡಿ.ಕೆ. ಶಿವಕುಮಾರ್ ಸಿಬಿಐ ತನಿಖೆಯ ತೂಗುಗತ್ತಿಯಿಂದ ಸದ್ಯಕ್ಕೆ ಪಾರಾದಂತಾಗಿದೆ.
ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂಪಡೆದು 2023ರ ನವಂಬರ್ 28ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ಪೀಠ ಗುರುವಾರ ಪ್ರಕಟಿಸಿತು.
ತೀರ್ಪಿನ ಸಾರಾಂಶ:
ಅರ್ಜಿಯಲ್ಲಿನ ಎಲ್ಲ ಪಕ್ಷಗಾರರ ವಾದ ಮತ್ತು ಕಾನೂನಿನ ನಿಬಂಧನೆಗಳನ್ನು ಸೂಕ್ಷ್ಮವಾಗಿ ಆಲಿಸಿ, ಪರಿಶೀಲಿಸಿದ ಬಳಿಕ ಈ ಸಂಘರ್ಷವು ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವೆ ಇದೆ ಎನ್ನುವುದು ತಿಳಿದುಬಂದಿದೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಅರ್ಜಿಯಲ್ಲಿ ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಂವಿಧಾನಿಕ ಅಧಿಕಾರದ ಕುರಿತಾದ ನಿಬಂಧನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಎತ್ತಲಾಗಿದೆ. ಕೇಂದ್ರ ಸರ್ಕಾರವು ಎಲ್ಲಿಯವರೆಗೆ ರಾಜ್ಯವೊಂದರಲ್ಲಿ ಸಿಬಿಐ ಅನ್ನು ಕಾರ್ಯನಿರ್ವಹಣೆಗೆ ಹಚ್ಚಬಹುದು ಎಂಬುದಕ್ಕೆ ಸಂಬಂಧಿಸಿದ ಕಾನೂನಿನ ವಿಚಾರವನ್ನೊಳಗೊಂಡಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದೆ. ಪ್ರಕರಣದಲ್ಲಿನ ಕಾನೂನಿನ ವಿಚಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಸಂಬಂಧಿಸಿರುವುರಿಂದ, ಪ್ರಕರಣವನ್ನು ಸುಪ್ರೀಂಕೋರ್ಟ್ ನಿರ್ಧರಿಸುವುದು ಸೂಕ್ತವಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಿಬಿಐ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದೆ. ಇಲ್ಲಿ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಎಲ್ಲಿಯವರೆಗೆ ವಿಸ್ತರಿಸಬಹುದು ಮತ್ತು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಏನಿದೆ ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗಳು ಅಡಗಿವೆ. ಆದ್ದರಿಂದ, ಪ್ರಕರಣವನ್ನು ಸುಪ್ರೀಂಕೋರ್ಟ್ ತನ್ನ ವ್ಯಾಪ್ತಿಯಲ್ಲಿ ನಿರ್ಧರಿಸುವುದು ಸೂಕ್ತವಾಗಿದೆ. ಈ ಎಲ್ಲ ಕಾರಣಗಳಿಂದ ಅರ್ಜಿಗಳು ಅನೂರ್ಜಿತವಾಗಲಿದ್ದು, ವಜಾಗೊಳಿಸಲಾಗಿದೆ. ಅದಾಗ್ಯೂ, ಅರ್ಜಿದಾರರು ಈ ಕುರಿತು ಸುಪ್ರೀಂಕೋರ್ಟ್ನಲ್ಲಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಅರ್ಜಿದಾರರ ವಾದ:
ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ್ದ ಪಿ. ಪ್ರಸನ್ನಕುಮಾರ್, ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ಎಫ್ಐಆರ್ ಬಾಕಿ ಉಳಿಯಲಿದೆ. ಇದು ಪ್ರಮುಖ ವಿಚಾರವಾಗಿದೆ. ಇನ್ನು ಸಿಬಿಐ ಎಫ್ಐಆರ್ ಪ್ರಶ್ನಿಸಿ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ವಿಶೇಷ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪರಾಧದ ತನಿಖೆ ನಡೆಸುವ ಸಿಬಿಐ ಸಂಪೂರ್ಣ ಸ್ವತಂತ್ರವಾಗಿರುತ್ತದೆ. ಒಮ್ಮೆ ಸಿಬಿಐ ಪ್ರಕರಣ ದಾಖಲಿಸಿದ ನಂತರ ಅದು ತಾರ್ಕಿಕ ಅಂತ್ಯ ಕಾಣಬೇಕು. ಸಿಬಿಐ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ವಜಾ ಮಾಡಬೇಕು. ಇದರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಸರ್ಕಾರದ ವಾದ:
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಸಿಬಿಐ ಕೇಂದ್ರ ಸರ್ಕಾರದ ಒಂದು ಘಟಕ. ಅದು ಸ್ವತಂತ್ರ ಸಂಸ್ಥೆಯಲ್ಲ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಡಿ ಬರುವ ಸಿಬಿಐಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತದೆ. ಹಿಂದಿನ ಬಿಜೆಪಿ ಸರ್ಕಾರ ಮೌಖಿಕ ನಿರ್ದೇಶನದ ಮೂಲಕ ಸಿಬಿಐ ತನಿಖೆಗೆ ಅನುಮತಿಸಿತ್ತು. ಈಗ ಸರ್ಕಾರ ಬದಲಾಗಿದ್ದು, ನ್ಯಾಯಾಲಯದ ಮುಂದೆ ಬಂದಿದೆ. ಸಿಬಿಐ ತನಿಖೆಗೆ ಒಪ್ಪಿಗೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಹಿಂದಿನ ಸರ್ಕಾರ ವಂಚಿಸಿದೆ. ಇಲ್ಲಿ ಅನುಮತಿ ಪಡೆದಿರುವುದು ಪ್ರಶ್ನೆಯಲ್ಲ. ಒಪ್ಪಿಗೆ ಕಾನೂನುಬಾಹಿರವಾಗಿ ನೀಡಿರುವುದು ವಿಚಾರವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ಕಾರ ಕಾನೂನನ್ನು ಈ ರೀತಿ ಬಳಕೆ ಮಾಡಲು ಸಾಧ್ಯವಿಲ್ಲ. ಜತೆಗೆ, ದೆಹಲಿ ವಿಶೇಷ ಪೊಲೀಸ್ ಕಾಯ್ದೆ ಸೆಕ್ಷನ್ 3ರ ಅಡಿ ಇಲ್ಲಿ ಸಾಮಾನ್ಯ ಒಪ್ಪಿಗೆ ಪಡೆಯಲಾಗಿಲ್ಲ. ಈ ಪ್ರಕರಣದಲ್ಲಿ ವಿಶೇಷ ಒಪ್ಪಿಗೆ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣವೇನು?
ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ 2022ರ ಸೆಪ್ಟಂಬರ್ 25ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ಶಿವಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು 2023ರ ಏಪ್ರಿಲ್ 20ರಂದು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶ ಮತ್ತು ಸಿಬಿಐ ತನಿಖೆಗೆ ತಡೆ ನೀಡಿತ್ತು.
ಈ ಮಧ್ಯೆ, ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರ್ಕಾರ ರಚನೆಯಾಗಿತ್ತು. ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು 2023ರ ನವಂಬರ್ 28ರಂದು ರಾಜ್ಯ ಸರ್ಕಾರ ಹಿಂಪಡೆದಿತ್ತಲ್ಲದೆ, ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿತ್ತು. ಅದನ್ನು ಪ್ರಶ್ನಿಸಿ ಸಿಬಿಐ ಮತ್ತು ಯತ್ನಾಳ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಆಗಸ್ಟ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
Related Articles
Thank you for your comment. It is awaiting moderation.
Comments (0)