ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಭವಿಷ್ಯ ನಾಳೆ ನಿರ್ಧಾರ; ತೀರ್ಪು ಪ್ರಕಟಿಸಲಿರುವ ಹೈಕೋರ್ಟ್

ಬೆಂಗಳೂರು: ಆದಾಯ ಮೀರಿ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ಕುರಿತ ತೀರ್ಪನ್ನು ಹೈಕೋರ್ಟ್‌ ಗುರುವಾರ ಪ್ರಕಟಿಸಲಿದೆ.

ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದ ಹಾಲಿ ಕಾಂಗ್ರೆಸ್ ಸರ್ಕಾರದ ನಿರ್ಧಾರ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿಸಿರುವ ತೀರ್ಪನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್‌ ಎಂ. ಅಡಿಗ ಅವರನ್ನೊಳಗೊಂಡ ಪೀಠ ಗುರುವಾರ ಸಂಜೆ 4.30ಕ್ಕೆ ಪ್ರಕಟಿಸಲಿದೆ.

ಪ್ರಕರಣವೇನು?
ಆದಾಯ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಸಿಬಿಐ ತನಿಖೆಗೆ ಅನುಮತಿ ನೀಡಿ ಬಿಜೆಪಿ ಸರ್ಕಾರ 2022ರ ಸೆಪ್ಟಂಬರ್ 25ರಂದು ಆದೇಶಿಸಿತ್ತು. ಆ ಆದೇಶ ರದ್ದು ಕೋರಿ ಶಿವಕುಮಾರ್‌ ಸಲ್ಲಿಸಿದ್ದ ತಕರಾರು ಅರ್ಜಿಯನ್ನು 2023ರ ಏಪ್ರಿಲ್ 20ರಂದು ಹೈಕೋರ್ಟ್‌ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಈ ತೀರ್ಪು ಪ್ರಶ್ನಿಸಿ ಶಿವಕುಮಾರ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶ ಮತ್ತು ಸಿಬಿಐ ತನಿಖೆಗೆ ತಡೆ ನೀಡಿತ್ತು.

ಈ ಮಧ್ಯೆ, ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸರ್ಕಾರ ರಚನೆಯಾಗಿತ್ತು. ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು 2023ರ ನವಂಬರ್ 28ರಂದು ರಾಜ್ಯ ಸರ್ಕಾರ ಹಿಂಪಡೆದಿತ್ತಲ್ಲದೆ, ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿತ್ತು. ಅದನ್ನು ಪ್ರಶ್ನಿಸಿ ಸಿಬಿಐ ಮತ್ತು ಯತ್ನಾಳ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಆಗಸ್ಟ್ 12ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.

Related Articles

Comments (0)

Leave a Comment