ವಾಲಿಬಾಲ್, ಬಾಸ್ಕೆಟ್ ಬಾಲ್ ತರಬೇತುದಾರರ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಗುತ್ತಿಗೆ ಒಪ್ಪಂದದಲ್ಲಿ ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾಲಿಬಾಲ್ ಹಾಗೂ ಬಾಸ್ಕೆಟ್‌ಬಾಲ್ ತರಬೇತುದಾರರ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ವರ್ಗಾವಣೆ ಆದೇಶ ಪ್ರಶ್ನಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ದಾವಣಗೆರೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ವಾಲಿಬಾಲ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಿರ್ಜಾ ಷಾ ಜಮಾ, ಬೆಳಗಾವಿ ಉಪ ನಿರ್ದೇಶಕರ ಕಚೇರಿಯಲ್ಲಿ ಬಾಸ್ಕೆಟ್‌ಬಾಲ್ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರಣ್ಣಗೌಡ ಎಸ್. ಪಾಟೀಲ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಅರ್ಜಿದಾರರು ಕಳೆದ 28 ವರ್ಷಗಳಿಂದ ಗುತ್ತಿಗೆ ಒಪ್ಪಂದದಲ್ಲಿ ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾರ್ವಕನಿಕ ಸೇವಕರು (ಸರ್ಕಾರಿ ನೌಕರರು) ಅಲ್ಲ. ಅದಾಗ್ಯೂ 2017ರಲ್ಲಿ ಅರ್ಜಿದಾರರೂ ಸೇರಿ 54 ಮಂದಿ ತರಬೇತುದಾರರನ್ನು ಸಾರ್ವತ್ರಿಕ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಜತೆಗೆ, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಸೇವೆ ಕಾಯಂಗೊಳಿಸಬೇಕೆಂಬ ಅರ್ಜಿದಾರರ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಹೀಗಿದ್ದಾಗ, ನಾಲ್ವರು ಅರ್ಜಿದಾರರನ್ನು ವರ್ಗಾವಣೆಗೊಳಿಸಿ ಕ್ರೀಡಾ ಪ್ರಾಧಿಕಾರ 2025ರ ಜೂನ್ 26ರಂದು ಆದೇಶ ಹೊರಡಿಸಿದೆ. ಈ ಆದೇಶ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಇದೇ ವಿಚಾರದಲ್ಲಿ 2017ರ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆ ಇದ್ದಾಗ, ಪುನಃ ವರ್ಗಾವಣೆ ಮಾಡಿದ್ದು ಯಾವ ಆಧಾರದಲ್ಲಿ ಎಂಬ ನ್ಯಾಯಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಆ ಬಗ್ಗೆ ಮಾಹಿತಿ ಪಡೆದು ಉತ್ತರಿಸುವುದಾಗಿ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಜೂನ್ 26ರ ವರ್ಗಾವಣೆ ಆದೇಶಕ್ಕೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಿತಲ್ಲದೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

Related Articles

Comments (0)

Leave a Comment