ಫೋನ್‌ ಕದ್ದಾಲಿಕೆ ಪ್ರಕರಣ: ಸಿಎಟಿಯ ಇಬ್ಬರು ನ್ಯಾಯಾಧೀಶರ ನಡುವೆ ಮೂಡದ ಒಮ್ಮತ, ಅಲೋಕ್ ಕುಮಾರ್ ಅರ್ಜಿ ಮೂರನೇ ನ್ಯಾಯಾಧೀಶರಿಗೆ ವರ್ಗಾ

ಬೆಂಗಳೂರು: ಟೆಲಿಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಐಪಿಎಸ್‌ ಅಧಿಕಾರಿ ಅಲೋಕ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಇಬ್ಬರು ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಮೂರನೇ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ.

ಅಲೋಕ್‌ ಕುಮಾರ್‌ ಅರ್ಜಿ ಕುರಿತು ಸಿಎಟಿಯ ಇಬ್ಬರು ಸದಸ್ಯರ ಪೀಠ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟವಾಗಿದ್ದು, ಅದರಲ್ಲಿ ಸಿಎಟಿ ಸದಸ್ಯರ ನಡುವೆ ಒಮ್ಮತ ಮೂಡಿಲ್ಲ. ನ್ಯಾಯಾಧೀಶ ಬಿ.ಕೆ. ಶ್ರೀವಾತ್ಸವ ಅವರು ಇಲಾಖಾ ತನಿಖೆ ರದ್ದುಗೊಳಿಸಲು ಆದೇಶ ನೀಡಿದ್ದರೆ ಮತ್ತೊಬ್ಬ ನ್ಯಾಯಾಧೀಶ ಸಂತೋಷ್‌ ಮೆಹ್ರಾ ಅವರು ಅಲೋಕ್‌ ಕುಮಾರ್‌ ಅರ್ಜಿ ವಜಾಗೊಳಿಸಿದ್ದರು.

ಅರ್ಜಿ ಕುರಿತು ಇಬ್ಬರು ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಲು ಮೂರನೇ ನ್ಯಾಯಾಧೀಶರಿಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ:
ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಟೆಲಿಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಬಿ ರಿಪೋರ್ಟ್‌ ಸಲ್ಲಿಸಿದೆ.

ಇದರಿಂದ, ಅಲೋಕ್‌ ಕುಮಾರ್‌ ಸೇರಿ ಇನ್ನಿತರ ಪೊಲೀಸ್‌ ಅಧಿಕಾರಿಗಳ ವಿರುದ್ಧ ಆದೇಶಿಸಲಾಗಿದ್ದ ಇಲಾಖಾ ತನಿಖೆ ಕೈಬಿಡಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದರು. ಆದರೆ, ಇಲಾಖಾ ವಿಚಾರಣೆ ಕೈಬಿಡುವ ಆದೇಶ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ.

ಅಷ್ಟರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗಿ, ಅಧಿಕಾರಕ್ಕೆ ಬಂದಿದ್ದ ನೂತನ ಕಾಂಗ್ರೆಸ್ ಸರ್ಕಾರ ಇಲಾಖಾ ವಿಚಾರಣೆ ಮುಂದುವರಿಸಲು ತೀರ್ಮಾನಿಸಿತ್ತು. ಆ ಸಂಬಂಧ ವಿಚಾರಣೆ ನೋಟಿಸ್‌ ಪ್ರಶ್ನಿಸಿ ಅಲೋಕ್‌ ಕುಮಾರ್‌ ಸಿಎಟಿಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಸಿಎಟಿ, ಇಲಾಖಾ ವಿಚಾರಣೆ ನೋಟಿಸ್‌‌ಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತಲ್ಲದೆ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಇದೀಗ ವಿಭಿನ್ನ ತೀರ್ಪು ಬಂದಿರುವ ಹಿನ್ನೆಲೆ ಮೂರನೇ ನ್ಯಾಯಾಧೀಶರು ಅರ್ಜಿ ಸಿಂಧುತ್ವದ ಬಗ್ಗೆ ತೀರ್ಮಾನಿಸಬೇಕಿದೆ. ಇಲಾಖಾ ವಿಚಾರಣೆ ಬಾಕಿ ಇದೆ ಎಂಬ ಕಾರಣದಿಂದಾಗಿಯೇ ಅಲೋಕ್‌ ಕುಮಾರ್‌ ಮುಂಬಡ್ತಿ ಕೂಡಾ ಬಾಕಿ ಉಳಿದಿದೆ.

Related Articles

Comments (0)

Leave a Comment