ಚುನಾವಣಾ ಬಾಂಡ್ ಮೂಲಕ ಸುಲಿಗೆಗೆ ಇಡಿ ದುರ್ಬಳಕೆ ಆರೋಪ; ನಿರ್ಮಲಾ ಸೀತಾರಾಮನ್, ನಡ್ಡಾ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ

ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು (ಇಡಿ) ದುರ್ಬಳಕೆ ಮಾಡಿಕೊಂಡ ಆರೋಪ ಸಂಬಂಧ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಹಾಗೂ ಜೆ.ಪಿ. ನಡ್ಡಾ ವಿರುದ್ದ ಎಫ್‌ಐಆರ್‌ ದಾಖಲಿಸಲು ಬೆಂಗಳೂರಿನ ತಿಲಕ್‌ ನಗರ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರಾಗಿರುವ ಆದರ್ಶ್‌ ಆರ್‌. ಐಯ್ಯರ್‌ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ಕೆ.ಎನ್‌. ಶಿವಕುಮಾರ್‌ ಈ ಆದೇಶ ಮಾಡಿದ್ದಾರೆ.

ಕೋರ್ಟ್ ಕಚೇರಿಯು ದೂರು ಮತ್ತು ಅದರೊಂದಿಗೆ ಲಗತ್ತಿಸಿರುವ ದಾಖಲೆಗಳನ್ನು ಸಂಬಂಧಪಟ್ಟ ಪೊಲೀಸರಿಗೆ ಒದಗಿಸಬೇಕು. ಎಫ್‌ಐಆರ್‌‌‌ಗಾಗಿ ನಿರೀಕ್ಷಿಸಲಾಗುತ್ತಿದೆ. ವಿಚಾರಣೆಗಾಗಿ ಪ್ರಕರಣವನ್ನು ಅಕ್ಟೋಬರ್‌ 10ಕ್ಕೆ ನಿಗದಿಪಡಿಸುವಂತೆ ಆದೇಶದಲ್ಲಿ ಹೇಳಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಇಡಿ ಅಧಿಕಾರಿಗಳು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರೂ ಆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿಯ ಪದಾಧಿಕಾರಿಗಳು, ರಾಜ್ಯ ಬಿಜೆಪಿ ಹಿಂದಿನ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಮತ್ತು ಹಾಲಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳನ್ನು ಖಾಸಗಿ ದೂರಿನಲ್ಲಿ ಆರೋಪಿಗಳಾನ್ನಗಿಸಲಾಗಿದೆ.

ದೂರಿನಲ್ಲೇನಿದೆ?
ಆರೋಪಿಗಳು ಬಹುರಾಷ್ಟ್ರೀಯ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸುಲಿಗೆ ನಡೆಸಿದ್ದು, ಅವರಿಂದ ಚುನಾವಣೆ ಬಾಂಡ್‌ ಖರೀದಿಸಿ ಅಂದಾಜು 8 ಸಾವಿರ ಕೋಟಿ ರೂ. ಗಳಿಗೂ ಅಧಿಕ ಲಾಭ ಮಾಡಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಹುರಾಷ್ಟ್ರೀಯ ಕಂಪನಿಗಳಿಂದ ಕೋಟ್ಯಂತರ ರೂ. ಸುಲಿಗೆ ಮಾಡಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿ ಬೊಕ್ಕಸ ತುಂಬಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಜಾರಿ ನಿರ್ದೇಶನಾಲಯದ ಮೇಲೆ ಹಿಡಿತ ಹೊಂದಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಡಿ ಅಧಿಕಾರಿಗಳನ್ನು ಹಲವು ಕಾರ್ಪೊರೇಟ್‌ ಕಂಪನಿಗಳ ಸಿಇಒ, ಎಂಡಿಗಳ ಮೇಲೆ ದಾಳಿಯ ಬೆದರಿಕೆ ಹಾಕಿದ್ದಾರೆ. ಇದರಿಂದ,ವಿಚಲಿತರಾಗಿರುವ ಕಾರ್ಪೊರೇಟ್‌ ಕಂಪನಿಗಳು ಬಹುಕೋಟಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ರಾಷ್ಟ್ರೀಯ ಮತ್ತು ರಾಜ್ಯ ಬಿಜೆಪಿಗೆ ದೇಣಿಗೆಯಾಗಿ ನೀಡಿವೆ. ಇವುಗಳನ್ನು ಬಿಜೆಪಿಯು ನಗದಾಗಿ ಪರಿವರ್ತಿಸಿಕೊಂಡಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮನವಿ ಏನು?
ನಿರ್ಮಲಾ ಸೀತಾರಾಮನ್‌, ಜೆ.ಪಿ. ನಡ್ಡಾ, ನಳೀನ್‌ ಕುಮಾರ್‌ ಕಟೀಲ್‌, ವಿಜಯೇಂದ್ರ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ಗಳಾದ 384 (ಸುಲಿಗೆ), 120ಬಿ (ಕ್ರಿಮಿನಲ್‌ ಪಿತೂರಿ) ಜತೆಗೆ 34ರ ಅಡಿ ಪ್ರಕರಣ ದಾಖಲಿಸಲು ತಿಲಕ್‌ ನಗರ ಪೊಲೀಸರಿಗೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Articles

Comments (0)

Leave a Comment