ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್‌ಗೆ ಜಾಮೀನು; ಬೇಲ್ ಸಿಕ್ಕರೂ ಇಲ್ಲ ಬಿಡುಗಡೆ ಭಾಗ್ಯ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರನ್ಯಾ ರಾವ್​ ಹಾಗೂ ಮತ್ತೋರ್ವ ಆರೋಪಿಗೆ ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆದರೆ, ರನ್ಯಾ ರಾವ್​ ವಿರುದ್ಧ ಕೇಂದ್ರ ಆರ್ಥಿಕ ಗುಪ್ತಚರ ನಿರ್ದೇಶನಾಲಯ (ಸಿಇಐಬಿ) ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (ಕಾಫಿಪೋಸಾ) ಅಡಿಯಲ್ಲಿ ಬಂಧನ ಆದೇಶ ಹೊರಡಿಸಿರುವುದರಿಂದ ಜಾಮೀನು ದೊರೆತರೂ ನಟಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೊದಲ ಆರೋಪಿ ರನ್ಯಾ ರಾವ್ ಹಾಗೂ ಎರಡನೇ ಆರೋಪಿ ತರುಣ್ ಕೊಂಡಾರು ರಾಜು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ವಿಶ್ವನಾಥ್ ಸಿ. ಗೌಡರ್ ಅವರಿದ್ದ ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣದಲ್ಲಿ ತನಿಖಾಧಿಕಾರಿಗಳಾಗಿರುವ ಕೇಂದ್ರ ಆರ್ಥಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ತನಿಖೆಯ ಅಂತಿಮ ವರದಿ ಸಲ್ಲಿಸದೇ‌ ಇರುವುದನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು‌‌ ನೀಡಿದೆ.

ಆರೋಪಿಗಳು ತಲಾ 2 ಲಕ್ಷ ರೂ.‌ ಮೊತ್ತದ ವೈಯುಕ್ತಿಕ ಬಾಂಡ್ ಹಾಗೂ ಅಷ್ಟೇ‌ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ಒದಗಿಸಬೇಕು. ತನಿಖಾಧಿಕಾರಿಗಳ‌ ಹಾಗೂ ನ್ಯಾಯಾಲಯದ ಪೂರ್ವಾನುಮತಿ‌ ಇಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ. ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ಪ್ರಕರಣ ಸಾಕ್ಷ್ಯ ನಾಶ ಮಾಡಬಾರದು. ಸಾಕ್ಷಿಗಳ ಮೇಲೆ‌ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪ್ರಕರಣವೇನು?
ದುಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ರನ್ಯಾ ರಾವ್ ಅವರನ್ನು ಕಳೆದ ಮಾರ್ಚ್ 3ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆ, ರನ್ಯಾ ರಾವ್ ಬಳಿ 12.56 ಕೋಟಿ ರೂ. ಮೌಲ್ಯದ ಚಿನ್ನ ದೊರೆತಿತ್ತು. ಬಳಿಕ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಮತ್ತು ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಇದರಿಂದ, ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು.‌ ಈ ಮಧ್ಯೆ, ರನ್ಯಾ ವಿರುದ್ಧ ಕಾಫಿಪೋಸಾ ಅಡಿ ಬಂಧನ ಆದೇಶ ಹೊರಡಿಸಲಾಗಿತ್ತು.

ರನ್ಯಾ ತಾಯಿಯಿಂದ ಹೈಕೋರ್ಟ್‌‌ಗೆ ಅರ್ಜಿ:
ಕಾಫಿಪೋಸಾ ಕಾಯ್ದೆಯಡಿ ರನ್ಯಾ ವಿರುದ್ಧ ಬಂಧನ ಆದೇಶ ಹೊರಡಿಸಿರುವ ಕ್ರಮವನ್ನು ಪ್ರಶ್ನಿಸಿ ಆಕೆಯ ತಾಯಿ ಹೆಚ್​​.ಪಿ. ರೋಹಿಣಿ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ.

Related Articles

Comments (0)

Leave a Comment