ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣ; ಭವಾನಿ ರೇವಣ್ಣ ವಿರುದ್ಧದ ಆರೋಪ ಕೈಬಿಡಲು ವಿಶೇಷ ಕೋರ್ಟ್ ನಕಾರ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಆರೋಪಮುಕ್ತಗೊಳಿಸುವಂತೆ ಕೋರಿ ಭವಾನಿ ರೇವಣ್ಣ ಸೇರಿ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ಭವಾನಿ ರೇವಣ್ಣ ಹಾಗೂ ಅವರ ಸೂಚನೆಯಂತೆ ಸಂತ್ರಸ್ತೆಯನ್ನು ತನ್ನ ತೋಟದ ಮನೆಯಲ್ಲಿ ಒತ್ತೆಯಾಳಾಗಿಟ್ಟಿದ್ದ ಆರೋಪ ಹೊತ್ತಿರುವ ಏಳನೇ ಆರೋಪಿ ಕೆ.ಎ. ರಾಜಗೋಪಾಲ್‌ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಕೆ.ಎನ್‌. ಶಿವಕುಮಾರ್‌ ಅವರು ಸೋಮವಾರ (ಅಕ್ಟೋಬರ್ 13) ವಜಾಗೊಳಿಸಿದ್ದಾರೆ.

ಕೋರ್ಟ್ ಆದೇಶವೇನು?
ಅತ್ಯಾಚಾರ ಸಂತ್ರಸ್ತೆಯನ್ನು 2024ರ ಏಪ್ರಿಲ್ 22 ಹಾಗೂ 24ರಂದು ಭವಾನಿ ಅವರ ಸೂಚನೆಯಂತೆ ಅಪಹರಿಸಿಲ್ಲ ಎಂದಾದರೂ, ಆನಂತರದ ಘಟನೆಗಳು ಸಂತ್ರಸ್ತೆಯನ್ನು ಅಪಹರಿಸಿರುವಂತೆ ಕಾಣುತ್ತಿವೆ. ಸಂತ್ರಸ್ತೆಯು ತನಿಖಾಧಿಕಾರಿ ಮುಂದೆ ಅಪರಾದ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 161 ಹಾಗೂ ಮ್ಯಾಜಿಸ್ಟ್ರೇಟ್‌ ಮುಂದೆ ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ದಾಖಲಿಸಿರುವ ಹೇಳಿಕೆಯಲ್ಲಿ ಭವಾನಿ ಪಾತ್ರದ ಕುರಿತು ಉಲ್ಲೇಖಿಸಿದ್ದಾರೆ. ಅಪಹರಣ ನಡೆದಿದೆ ಎನ್ನಲಾದ ದಿನದಂದು ಭವಾನಿ ಮತ್ತು ಇತರ ಆರೋಪಿಗಳ ನಡುವಿನ ಕರೆ ದಾಖಲೆ ವಿಶ್ಲೇಷಣೆ (ಸಿಡಿಆರ್), ವಾಟ್ಸ್‌ಆ್ಯಪ್‌ ಕರೆ ದಾಖಲೆ ಮತ್ತು ಸಂತ್ರಸ್ತೆಯ ಹೇಳಿಕೆಯು ಮೇಲ್ನೋಟಕ್ಕೆ ಆಕೆಯನ್ನು ಒತ್ತೆಯಾಳಾಗಿ ಇಡುವುದಕ್ಕೆ ಪಿತೂರಿ ನಡೆಸಿರುವುದಕ್ಕೆ ಪೂರಕವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಂತ್ರಸ್ತೆಯ ಅಪಹರಣದಲ್ಲಿ ಭವಾನಿ ಪಾತ್ರ ಇದೆ ಎಂಬುದರ ಕುರಿತು ಕೆಲ ಸಾಕ್ಷಿಗಳು ಸಮಗ್ರವಾಗಿ ಮಾಹಿತಿ ಒದಗಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಸಂತ್ರಸ್ತೆಯ ಪುತ್ರ/ದೂರುದಾರನ ಹೇಳಿಕೆಯು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಎಚ್.ಎನ್. ಸತೀಶ್ ಬಾಬು ಅಲಿಯಾಸ್ ಸತೀಶ್‌ ಬಾಬಣ್ಣನು ಹೇಗೆ ಭವಾನಿ ಸೂಚನೆಯಂತೆ ತಮ್ಮ ತಾಯಿಯನ್ನು ಕರೆದೊಯ್ದು ಗುಪ್ತವಾಗಿ ರಾಜಗೋಪಾಲ್‌ ಅವರ ತೋಟದ ಮನೆಯಲ್ಲಿ ಒತ್ತೆಯಾಗಿಸಿದ್ದರು ಎಂಬುದಕ್ಕೆ ಪೂರಕವಾಗಿದೆ. ಈ ಹಿನ್ನೆಲೆಯಲ್ಲಿ, ಆರೋಪ ಪಟ್ಟಿ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲಿಸಿದಾಗ ಸಂತ್ರಸ್ತೆಯ ಅಪಹರಣದಲ್ಲಿ ಆರೋಪಿತ ಅಪರಾಧಕ್ಕೆ ಸಂಬಂಧಿಸಿದಂತೆ ರಾಜಗೋಪಾಲ್‌ ಮತ್ತು ಭವಾನಿ ಅವರ ಪಾತ್ರದ ಬಗ್ಗೆ ಸಾಕಷ್ಟು ದಾಖಲೆಗಳಿರುವುದರಿಂದ ಆರೋಪ ಮುಕ್ತಕ್ಕೆ ಈ ಹಂತದಲ್ಲಿ ಅವರು ಅರ್ಹರಾಗಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?
ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಬಹಿರಂಗವಾಗುತ್ತಿದ್ದಂತೆಯೇ ಹಾಸನದ ಹೊಳೆನರಸೀಪುರದ ಗನ್ನಿಗಢ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ಸಂತ್ರಸ್ತೆಯನ್ನು ಅಪಹರಿಸಲಾಗಿತ್ತು. ಪ್ರಕರಣ ಕುರಿತು ಹೆಚ್ಚಿನ ವಿಚಾರ ಬಹಿರಂಗವಾಗುವುದನ್ನು ತಪ್ಪಿಸಲು ಮತ್ತು ಆನಂತರದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ರಚಿಸಿದ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಮಾಹಿತಿ ದೊರೆಯುವುದನ್ನು ತಪ್ಪಿಸಲು 2024ರ ಏಪ್ರಿಲ್‌ 29ರಂದು ಮೈಸೂರು ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಹೆಬ್ಬಾಳು ಗ್ರಾಮದಿಂದ ಸತೀಶ್‌ ಬಾಬಣ್ಣ ಸೂಚನೆಯಂತೆ 3ನೇ ಆರೋಪಿ ಸುಜಯ್‌ ಮತ್ತು 4ನೇ ಆರೋಪಿ ಮಧು ಅಪಹರಿಸಿದ್ದರು ಎನ್ನಲಾಗಿದೆ.

ಸಂತ್ರಸ್ತೆಯನ್ನು ಬಿಡುಗಡೆ ಮಾಡುವಾಗ ಭವಾನಿ ಅವರ ಕಾರು ಚಾಲಕನಾದ 9ನೇ ಆರೋಪಿ ಅಜಿತ್‌ಕುಮಾರ್‌, ಸಂತ್ರಸ್ತೆಯಿಂದ ಬಲವಂತವಾಗಿ ತನ್ನನ್ನು ಯಾರು ಅಪಹರಿಸಿಲ್ಲ ಎಂದು ಆಕೆಯೇ ಹೇಳುವ ರೀತಿಯಲ್ಲಿ ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದ ಎನ್ನಲಾಗಿದ್ದು, ಈ ಹೇಳಿಕೆಯನ್ನು ಆನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಮಾಡಲಾಗಿತ್ತು.

ಇದರ ಬೆನ್ನಲ್ಲೇ, ಸಂತ್ರಸ್ತೆಯ ಪುತ್ರ ರಾಜು ಅವರು 2024ರ ಮೇ 2ರಂದು ನೀಡಿದ ದೂರಿನ ಅನ್ವಯ ಮೈಸೂರಿನ ಕೆ.ಆರ್‌. ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 365, 506, 504, 201, 109, 120B ಜೊತೆಗೆ 34 ಅಡಿ ಪ್ರಕರಣ ದಾಖಲಾಗಿತ್ತು. ಇಲ್ಲಿ ಎಚ್‌.ಡಿ. ರೇವಣ್ಣ ಮತ್ತು ಸತೀಶ್‌ ಬಾಬು, ಸುಜಯ್‌, ಎಚ್‌.ಎನ್‌. ಮಧು, ಎಚ್‌.ಡಿ. ಮನುಗೌಡ, ಎಸ್‌.ಟಿ. ಕೀರ್ತಿ, ಕೆ.ಎ. ರಾಜಗೋಪಾಲ್‌, ಅಜಿತ್‌ ಕುಮಾರ್‌ ಅವರನ್ನು ಆರೋಪಿಗಳನ್ನಾಗಿಸಲಾಗಿತ್ತು. ಆದರೆ, ಭವಾನಿ ರೇವಣ್ಣ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರಲಿಲ್ಲ. ಆನಂತರ ಭವಾನಿ ಸೇರಿ 9 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.

Related Articles

Comments (0)

Leave a Comment