- ಟ್ರಯಲ್ ಕೋರ್ಟ್
- Like this post: 0
ಬಳ್ಳಾರಿಗೆ ಜೈಲಿಗೆ ದರ್ಶನ್ ಸ್ಥಳಾಂತರಕ್ಕೆ ಕೋರಿದ ಅರ್ಜಿ ವಿಚಾರಣೆ ಪೂರ್ಣ; ಸೆ.9ಕ್ಕೆ ಆದೇಶ ಕಾಯ್ದಿರಿಸಿದ ಸೆಷನ್ಸ್ ಕೋರ್ಟ್
- by Jagan Ramesh
- September 3, 2025
- 62 Views

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಕೋರಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಕಾರಾಗೃಹದಲ್ಲಿ ಹಾಸಿಗೆ, ಹೊದಿಕೆ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ, ಸೆಪ್ಟೆಂಬರ್ 9ಕ್ಕೆ ಆದೇಶ ಕಾಯ್ದಿರಿಸಿದೆ.
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ, ದಿಂಬು, ಹೊದಿಕೆ ಒದಗಿಸಲು ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳ ಕುರಿತು ಬುಧವಾರ ವಿಚಾರಣೆ ಪೂರ್ಣಗೊಳಿಸಿದ ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ಸೆಪ್ಟೆಂಬರ್ 9ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ದರ್ಶನ್ ಪರ ವಕೀಲರು ವಾದ ಮಂಡಿಸಿ, ಸಜಾಬಂದಿಗಳ ಕಾಯ್ದೆ 1963ರ ಪ್ರಕಾರ ನಾಲ್ಕು ರೀತಿಯ ಕೈದಿಗಳನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರಿಸಬಹುದು. ಗಲ್ಲು ಶಿಕ್ಷೆಗೆ ಗುರಿಯಾದ, ಜೀವಾವಧಿ ಶಿಕ್ಷೆಗೆ ಗುರಿಯಾದ, ದಂಡ ಪಾವತಿಸದ ಹಾಗೂ ದುರ್ವರ್ತನೆ ತೋರುವ ಕೈದಿಗಳನ್ನು ಸ್ಥಳಾಂತರ ಮಾಡಲು ಅವಕಾಶವಿದೆ. ಆದರೆ, ದರ್ಶನ್ ಅವರ ವರ್ತನೆ ಸರಿ ಇಲ್ಲ ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ ಎಂದು ವಿವರಿಸಿದರು.
ಶಿಸ್ತುಕ್ರಮದ ಆಧಾರದಲ್ಲಿ ಈ ಹಿಂದೆ ದರ್ಶನ್ ಅವರನ್ನು ಸ್ಥಳಾಂತರಿಸಲಾಗಿತ್ತು ಎನ್ನಲಾಗಿತ್ತು. ಯಾವ ಕಾರಣಕ್ಕೆ ಸ್ಥಳಾಂತರ ಮಾಡಿದ್ದರು ಎನ್ನುವುದನ್ನು ಗಮನಿಸಬೇಕು. 2024ರ ಆಗಸ್ಟ್ 23ರಂದು ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿತ್ತು. ಆಗ ಜೈಲು ಅಧಿಕಾರಿಗಳೇ ಕೆಲ ವಸ್ತುಗಳನ್ನು ಪೂರೈಸಿರುವುದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳು, ಸಿಬ್ಬಂದಿ ಸೇರಿ 9 ಮಂದಿ ಅಮಾನತುಗೊಂಡಿದ್ದರು. ಜೈಲಿನಲ್ಲಿ ನಡೆದಿರುವ ಘಟನೆಗೆ ಜೈಲು ಅಧಿಕಾರಿಗಳೇ ಕಾರಣವಾಗಿದ್ದಾರೆ. ಆದರೆ, ಈಗ ಅವರೇ ದರ್ಶನ್ ಅವರನ್ನು ಬೇರೊಂದು ಜೈಲಿಗೆ ಶಿಫ್ಟ್ ಮಾಡುವಂತೆ ಕೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರಲ್ಲದೆ, ದರ್ಶನ್ ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.
ಕನಿಷ್ಠ ಸೌಲಭ್ಯ ಮಾತ್ರ ಕೇಳುತ್ತಿದ್ದೇವೆ:
ದರ್ಶನ್ ಅವರಿಗೆ ಜೈಲಿನಲ್ಲಿ ಸೂಕ್ತ ಸೌಲಭ್ಯಗಳು ಸಿಗುತ್ತಿಲ್ಲ. ಕಾನೂನಾತ್ಮಕವಾಗಿ ಕೊಡಬೇಕಾದ ಕನಿಷ್ಠ ಸೌಲಭ್ಯಗಳಾಗಿರುವ ಊಟ, ಬಟ್ಟೆ, ಹಾಸಿಗೆ ಕೇಳುತ್ತಿದ್ದೇವೆ. ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಏನೂ ಕೊಡಲಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಟ್ಟೆ, ಚಪ್ಪಲಿ, ಹಾಸಿಗೆ, ದಿಂಬು, ಪ್ಲೇಟ್, ಸ್ಪೂನ್ ಸೇರಿ ಅಗತ್ಯ ವಸ್ತುಗಳನ್ನ ಸ್ವಂತವಾಗಿ ಪಡೆಯಲು ಕಾನೂನಿನಲ್ಲಿ ಅವಕಾಶವಿದ್ದು ಅದನ್ನು ಕೊಡಿ ಎಂದು ದರ್ಶನ್ ಕೇಳುತ್ತಿದ್ದಾರೆಯೇ ಹೊರತು ಹೆಚ್ಚುವರಿಯಾಗಿ ಏನೂ ಕೇಳುತ್ತಿಲ್ಲ ಎಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ದರ್ಶನ್ ಜೈಲು ಸೇರಿ ಹಲವು ದಿನಗಳಾಗಿದ್ದು, ಕುಟುಂಬಸ್ಥರಿಗೆ ಪೋನ್ ಮಾಡಲು ಅವಕಾಶ ನೀಡಿಲ್ಲ. ವಿಡಿಯೋ ಕಾನ್ಫರೆನ್ಸ್‌ಗೆ ಸಹ ಅವಕಾಶ ನೀಡಿಲ್ಲ. ಟಿವಿ, ಪೇಪರ್ ಪಡೆಯಲು ಅವಕಾಶ ಇದೆ. ಆದರೆ, ದರ್ಶನ್ ಅವರಿಗೆ ಸಿಗುತ್ತಿಲ್ಲ. ಹೊರಜಗತ್ತಿನಲ್ಲಿ ಏನು ನಡೆಯುತ್ತಿದೆ, ತಮ್ಮ ಪ್ರಕರಣ ಏನಾಗುತ್ತಿದೆ ಎನ್ನುವುದೂ ಅವರಿಗೆ ಗೊತ್ತಾಗುತ್ತಿಲ್ಲ. ಆದ್ದರಿಂದ, ದರ್ಶನ್ ಅವರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಎರಡೂ ಅರ್ಜಿಗಳ ಕುರಿತು ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಸೆಪ್ಟೆಂಬರ್ 9ಕ್ಕೆ ತೀರ್ಪು ಕಾಯ್ದಿರಿಸಿತು.
Related Articles
Thank you for your comment. It is awaiting moderation.
Comments (0)