ದರ್ಶನ್‌ಗೆ ಸೌಲಭ್ಯ ಕಲ್ಪಿಸದ ಆರೋಪ; ಜೈಲಿಗೆ ಭೇಟಿ ನೀಡಿ ಪರಿಶೀಲಿಸಲು ಡಿಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗೆ ಕೋರ್ಟ್ ಆದೇಶ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ಗೆ ಕಾರಾಗೃಹ ಕೈಪಿಡಿ ಅನುಸಾರ ಒದಗಿಸಬಹುದಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವಂತೆ ನ್ಯಾಯಾಲಯ ನೀಡಿದ್ದ ಆದೇಶ ಪಾಲನೆಯಾಗಿದೆಯೇ ಎಂಬ ಬಗ್ಗೆ ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿಗೆ ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ.

ಕೊರ್ಟ್ ನಿರ್ದೇಶನದ ಹೊರತಾಗಿಯೂ ಹಾಸಿಗೆ, ಹೊದಿಕೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸದೆ ಹಿಂಸೆ ನೀಡಲಾಗುತ್ತಿದೆ. ಈ ಕುರಿತು ನ್ಯಾಯಾಧೀಶರು ಜೈಲಿಗೆ ಬಂದು ಪರಿಶೀಲನೆ ನಡೆಸಲು ಆದೇಶಿಸಬೇಕು ಎಂದು ಕೋರಿ ನಟ ದರ್ಶನ್‌ ಗುರುವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ದರ್ಶನ್ ಅರ್ಜಿಯನ್ನು ಶುಕ್ರವಾರ ಭಾಗಶಃ ಪುರಸ್ಕರಿಸಿರುವ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಐ.ಪಿ. ನಾಯ್ಕ್‌ ಅವರು, ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ (ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೇಣಿಯ ನ್ಯಾಯಾಧೀಶರು) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಬೇಕು. ನ್ಯಾಯಾಲಯದ ಆದೇಶಂತೆ ದರ್ಶನ್‌ಗೆ ಜೈಲು ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ನಡೆಸಿ, ಅಕ್ಟೋಬರ್ 18ಕ್ಕೆ ಪರಿಶೀಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿತು.

ಪ್ರಕರಣವೇನು?
ಜೈಲಿನಲ್ಲಿ ಹಾಸಿಗೆ, ತಲೆದಿಂಬು, ಹೊದಿಕೆ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸುವಂತೆ ಕೋರಿ ದರ್ಶನ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ, ದರ್ಶನ್‌ಗೆ ಜೈಲು ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ 2025ರ ಸೆಪ್ಟೆಂಬರ್ 9ರಂದು ಆದೇಶಿಸಿತ್ತು. ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಗೊಳ್ಳಲು ಹೈಕೋರ್ಟ್‌ಗೆ ಶಿಫಾರಸು ಮಾಡಬೇಕು ಎಂದು ಕೋರಿ ದರ್ಶನ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ ಈ ಕುರಿತ ತೀರ್ಪು ಕಾಯ್ದಿರಿಸಿದೆ.

ತೀರ್ಪು ಪ್ರಕಟಣೆ ಬಾಕಿ ಇರುವ ಹಂತದಲ್ಲೇ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 310 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ದರ್ಶನ್‌, ನ್ಯಾಯಾಲಯದ ಆದೇಶದಂತೆ ಜೈಲು ಅಧಿಕಾರಿಗಳು ಸೌಲಭ್ಯ ಕಲ್ಪಿಸಿಲ್ಲ. ನ್ಯಾಯಾಲಯದ ಆದೇಶ ಪಾಲನೆಯಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಜೈಲಿಗೆ ಬಂದು ಪರಿಶೀಲಿಸಲು ನ್ಯಾಯಾಧೀಶರೊಬ್ಬರಿಗೆ ನಿರ್ದೇಶಿಸಬೇಕು ಎಂದು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತು ಗುರುವಾರ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ, ತೀರ್ಪು ಕಾಯ್ದಿರಿಸಿತ್ತು.

Related Articles

Comments (0)

Leave a Comment