ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರ ಕೋರಿದ್ದ ಅರ್ಜಿ ವಜಾ; ಕನಿಷ್ಠ ಸೌಲಭ್ಯ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಲು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ಮನವಿಯನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ. ಇದೇ ವೇಳೆ, ಜೈಲಿನಲ್ಲಿ ಕನಿಷ್ಠ ಸೌಲಭ್ಯ ಒದಗಿಸಬೇಕೆಂಬ ದರ್ಶನ್‌ ಅವರ ಮನವಿ ಮಾನ್ಯ ಮಾಡಿರುವ ನ್ಯಾಯಾಲಯ, ಕಾರಾಗೃಹ ಕೈಪಿಡಿಯ ಅನುಸಾರ ಯಾವೆಲ್ಲ ಕನಿಷ್ಠ ಸೌಲಭ್ಯಗಳು ಇವೆಯೋ ಅವೆಲ್ಲವನ್ನೂ ಒದಗಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಲು ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ಹಾಗೂ ಜೈಲಿನಲ್ಲಿ ಹಾಸಿಗೆ, ದಿಂಬು, ಹೊದಿಕೆ ಒದಗಿಸಲು ಮನವಿ ಮಾಡಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳ ಕುರಿತು ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ಮಂಗಳವಾರ ಪ್ರಕಟಿಸಿದರು.

ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ಬೇರೆ ಜೈಲುಗಳಿಗೆ ಸ್ಥಳಾಂತರಗೊಳಿಸುವಂತೆ ಕೋರಿ ಜೈಲು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಸಕಾರಣಗಳಿಲ್ಲ. ಜೈಲು ನಿಯಮ ಉಲ್ಲಂಘನೆ ಕಂಡು ಬಂದರೆ ಜೈಲಿನ ಹಿರಿಯ ಅಧಿಕಾರಿಗಳು ವರ್ಗಾವಣೆಗೆ ಕ್ರಮ ಕೈಗೊಳ್ಳಬಹುದು. ಈ ವೇಳೆ ಕಾರಾಗೃಹ ಕೈಪಿಡಿ ಅನುಸರಿಸಬೇಕು ಎಂದು ಆದೇಶಿಸಿದೆ.

ಇನ್ನು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಸಿಗೆ, ದಿಂಬು ಹಾಗೂ ಬೇಡ್​​ಶೀಟ್ ಸೇರಿ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು​ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಜೈಲು ಕೈಪಿಡಿಯ ಅನುಸಾರ ಕಲ್ಪಿಸಬಹುದಾದ ಕನಿಷ್ಠ ಸೌಲಭ್ಯಗಳನ್ನು ದರ್ಶನ್ ಅವರಿಗೆ ಒದಗಿಸಬೇಕು. ಜೈಲಿನ ಹೊರಗೆ ಓಡಾಡಲು ಅನುವು ಮಾಡಿಕೊಡಬೇಕು. ಆರೋಗ್ಯ ಸಮಸ್ಯೆಯಾದರೆ ಜೈಲಿನ ವೈದ್ಯರನ್ನು ಭೇಟಿ ಮಾಡಬಹುದು. ಸ್ವಂತ ಹಣದಿಂದ ಕಾರಾಗೃಹದಲ್ಲಿರುವ ಅಂಗಡಿಗಳಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ಸುಪ್ರೀಂಕೋರ್ಟ್‌ನಿಂದ ಜಾಮೀನು ರದ್ದುಗೊಂಡು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿ ದರ್ಶನ್‌ಗೆ ಸೆಷನ್ಸ್ ಕೋರ್ಟ್‌ನ ಈ ಆದೇಶದಿಂದ‌ ಕೊಂಚ ಮಟ್ಟಿಗೆ ಸಮಾಧಾನ ಸಿಕ್ಕಂತಾಗಿದೆ.

ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ಹಾಗೂ ವಕೀಲ ಸುನೀಲ್ ಕುಮಾರ್ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.

ವಿಷ ಕೊಡಿ ಎಂದಿದ್ದ ದರ್ಶನ್:
ಬೆಳಗಿನ ಕಲಾಪದ ಅವಧಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ನಟ ದರ್ಶನ್ ನ್ಯಾಯಾಧೀಶರ ಬಳಿ ತಮ್ಮದೊಂದು ಮನವಿ ಇದೆ ಎಂದು ತಿಳಿಸಿದ್ದರು.

ಅದೇನೆಂದು ನ್ಯಾಯಾಧೀಶರು ಕೇಳಿದಾಗ, “ನಾನು ಬಿಸಿಲು ನೋಡಿ 30 ದಿನಗಳಾಗಿವೆ. ಕೈ ಎಲ್ಲ ಫಂಗಸ್ ಬಂದಿದೆ. ಬೇರೆ ಯಾವ ಆರೋಪಿಗಳಿಗೂ ಬೇಡ, ನನಗೆ ಮಾತ್ರ ವಿಷ ನೀಡಲಿ. ಕೋರ್ಟ್‌ನಿಂದಲೇ ಈ ಆದೇಶ ನೀಡಬೇಕು” ಎಂದು ಮನವಿ ಮಾಡಿದ್ದರು.

ಇದನ್ನು ಕೇಳಿದ್ದ ನ್ಯಾಯಾಧೀಶರು, “ನೀವು ಹಾಗೆಲ್ಲ ಹೇಳುವಂತಿಲ್ಲ. ಜೈಲು ಅಧಿಕಾರಿಗಳಿಗೆ ಯಾವ ಆದೇಶ ನೀಡಬೇಕೋ ನೀಡುತ್ತೇವೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ” ಎಂದು ತಿಳಿಸಿ, ಪ್ರಕರಣವನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು.

Related Articles

Comments (0)

Leave a Comment