- ಟ್ರಯಲ್ ಕೋರ್ಟ್
- Like this post: 15
ನ್ಯಾಯಾಲಯದ ಆದೇಶವಿದ್ದರೂ ದರ್ಶನ್ಗೆ ಸೌಲಭ್ಯ ಕಲ್ಪಿಸದ ಆರೋಪ; ಜೈಲು ಅಧೀಕ್ಷಕರ ಖುದ್ದು ಹಾಜರಿಗೆ ಸೆಷನ್ಸ್ ಕೋರ್ಟ್ ನಿರ್ದೇಶನ
- by Jagan Ramesh
- September 25, 2025
- 45 Views

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎರಡನೇ ಆರೋಪಿ ನಟ ದರ್ಶನ್ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸುವಂತೆ ಹೊರಡಿಸಿರುವ ಆದೇಶ ಪಾಲಿಸದ ಬಗ್ಗೆ ವಿವರಣೆ ನೀಡಲು ಸೆಪ್ಟೆಂಬರ್ 30ರಂದು ಖುದ್ದು ಹಾಜರಾಗುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ.
ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಗಾಗಿ ಗುರುವಾರ ಪ್ರಕರಣವನ್ನು 57ನೇ ಸಿಟಿ ಸಿವಿಲ್ ಮತ್ತು ನ್ಯಾಯಾಲಯದಲ್ಲಿ ವಿಚಾರಣೆಗೆ ನಿಗದಿಪಡಿಸಲಾಗಿತ್ತು. ಜತೆಗೆ, ನ್ಯಾಯಾಲಯದ ಆದೇಶದ ಹೊರತಾಗಿಯೂ ಹಾಸಿಗೆ, ದಿಂಬು, ಹೊದಿಕೆ ಸೇರಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಶಿಫಾರಸು ಮಾಡುವಂತೆ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯೂ ವಿಚಾರಣೆಗೆ ನಿಗದಿಯಾಗಿತ್ತು.
ವಿಚಾರಣೆ ವೇಳೆ ದರ್ಶನ್ ಮತ್ತವರ ಪರ ವಕೀಲರು, ನ್ಯಾಯಾಲಯದ ಆದೇಶದಂತೆ ಜೈಲಿನಲ್ಲಿ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದರು. ಇತರ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್ ಅವರು, ತಮ್ಮನ್ನು ಈಗಲೂ ಕ್ವಾರಂಟೈನ್ ಸೆಲ್ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು, ನ್ಯಾಯಾಲಯದ ಆದೇಶ ಪಾಲಿಸದ ಮತ್ತು ಆರೋಪಿಗಳನ್ನು ಕ್ವಾರಂಟೈನ್ ಸೆಲ್ನಿಂದ ಸ್ಥಳಾಂತರಿಸದ ಬಗ್ಗೆ ಎರಡು ದಿನಗಳಲ್ಲಿ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ವಿವರಣೆ ನೀಡಬೇಕು. ಸೆಪ್ಟೆಂಬರ್ 30ರಂದು ಜೈಲು ಅಧೀಕ್ಷಕರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು. ಬಳಿಕ ಪವಿತ್ರಾ ಗೌಡ, ದರ್ಶನ್ ಇತರ ಐವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 9ರವರೆಗೆ ವಿಸ್ತರಿಸಿ ಆದೇಶಿಸಿದ ನ್ಯಾಯಾಲಯ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.
ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್ಗೆ ಅನುಮತಿ:
ಇದಕ್ಕೂ ಮುನ್ನ ದರ್ಶನ್ ಪರ ವಕೀಲರು ಹಾಜರಾಗಿ, ಕನಿಷ್ಠ ಸೌಲಭ್ಯ ಕಲ್ಪಿಸಲು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ಆಗ ನ್ಯಾಯಾಧೀಶರು, ಕೋರ್ಟ್ ಆದೇಶದ ಅನುಸಾರ ಜೈಲು ಅಧಿಕಾರಿಗಳು ನಿಮಗೆ ಸೌಲಭ್ಯ ಕಲ್ಪಿಸಿಲ್ಲವೇ? ಎಂದು ವಿಸಿ ಮೂಲಕ ಹಾಜರಿದ್ದ ದರ್ಶನ್ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ದರ್ಶನ್, ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವ ಯಾವುದೇ ಸೌಲಭ್ಯವನ್ನೂ ಜೈಲು ಅಧಿಕಾರಿಗಳು ಕಲ್ಪಿಸಿಲ್ಲ. 25 ಅಡಿ ಉದ್ದ ಮತ್ತು 3 ಅಡಿ ಅಗಲವಿರುವ ಪ್ಯಾಸೇಜ್ನಲ್ಲಿ ವಾಕಿಂಗ್ ಮಾಡಲು ಅನುಮತಿಸಿದ್ದಾರೆ. ಆದರೆ, ಈ ಜಾಗದಲ್ಲಿ ಸೂರ್ಯನ ಬೆಳಕು ಸಹ ಬೀಳುವುದಿಲ್ಲ ಎಂದರು.
ವಿಸಿ ಮೂಲಕ ಹಾಜರಾದ ಆರೋಪಿಗಳು:
ಪವಿತ್ರಾ ಗೌಡ, ದರ್ಶನ್ ಸೇರಿ ಜೈಲಿನಲ್ಲಿರುವ ಏಳು ಮಂದಿ ಆರೋಪಿಗಳು ಜೈಲಿನಿಂದಲೇ ವಿಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಎಂಟನೇ ಆರೋಪಿ ಹೊರತುಪಡಿಸಿ ಜಾಮೀನು ಮೇಲಿರುವ ಉಳಿದ 9 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಎಂಟನೇ ಆರೋಪಿ ರವಿಶಂಕರ್ ಪರ ವಕೀಲರು, ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು.
ಇದೇ ವೇಳೆ, ಪ್ರಕರಣದ 9ನೇ ಆರೋಪಿ ಧನರಾಜ್, ಜಪ್ತಿ ಮಾಡಿರುವ ತನ್ನ ಬೈಕ್ ಬಿಡುಗಡೆ ಮಾಡಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು. 12ನೇ ಆರೋಪಿ ಎಂ.ಲಕ್ಷ್ಮಣ್ ತನ್ನ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದರು.
ಇನ್ನು 6ನೇ ಆರೋಪಿ ಜಗದೀಶ್ ಮತ್ತು 7ನೇ ಆರೋಪಿ ಅನುಕುಮಾರ್, ತಮ್ಮನ್ನು ಈ ದಿನದವರೆಗೂ ಕ್ವಾರಂಟೈನ್ ಸೆಲ್ನಲ್ಲಿ ಇಡಲಾಗಿದೆ. ಸಾಮಾನ್ಯ ಬ್ಯಾರಕ್ಗೆ ಸ್ಥಳಾಂತರಿಸಿಲ್ಲ ಎಂದು ಜೈಲು ಅಧಿಕಾರಿಗಳ ವಿರುದ್ಧ ಆರೋಪಿಸಿದರು.
Related Articles
Thank you for your comment. It is awaiting moderation.
Comments (0)