- ಟ್ರಯಲ್ ಕೋರ್ಟ್
- Like this post: 5
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ದರ್ಶನ್‌ಗೆ ಹೊಸ ಚಾದರ, ಬಟ್ಟೆ ಒದಗಿಸಲು ಜೈಲು ಅಧಿಕಾರಿಗಳಿಗೆ ಸೆಷನ್ಸ್ ಕೋರ್ಟ್ ಆದೇಶ
- by Jagan Ramesh
- October 29, 2025
- 71 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಗುಣಮಟ್ಟದ ಹೊಸ ಚಾದರ, ಬಟ್ಟೆಗಳನ್ನು ಒದಗಿಸುವಂತೆ ಹಾಗೂ ತಿಂಗಳಿಗೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಿ ಆರೋಪಿಗಳಿಗೆ ನೀಡುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಜೈಲು ಅಧಿಕಾರಿಗಳು ಹಾಸಿಗೆ, ಹೊದಿಕೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು 56ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು ಬುಧವಾರ ಪ್ರಕಟಿಸಿದರು.
ಕೋರ್ಟ್ ಆದೇಶವೇನು?
ಸೌಲಭ್ಯಗಳನ್ನು ಕಲ್ಪಿಸದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ನೀಡಿದ್ದ ವಿವರಣೆಯನ್ನು ಭಾಗಶಃ ಅಂಗೀಕರಿಸಿರುವ ನ್ಯಾಯಾಲಯ, ಆರೋಪಿಗಳಿಗೆ ಜೈಲಿನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಕರ್ನಾಟಕ ಜೈಲು ಕೈಪಿಡಿಯ ನಿಯಮಗಳನ್ನು ಪಾಲನೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಜತೆಗೆ, ಪ್ರಕರಣದ 2ನೇ ಆರೋಪಿ ದರ್ಶನ್, 6ನೇ ಆರೋಪಿ ಜಗದೀಶ್, 7ನೇ ಆರೋಪಿ ಅನುಕುಮಾರ್, 11ನೇ ಆರೋಪಿ ಆರ್. ನಾಗರಾಜು, 12ನೇ ಆರೋಪಿ ಎಂ. ಲಕ್ಷ್ಮಣ್ ಹಾಗೂ 14ನೇ ಆರೋಪಿ ಪ್ರದೂಷ್ ರಾವ್‌ಗೆ ಗುಣಮಟ್ಟದ ಹೊಸ ಚಾದರ ಹಾಗೂ ಇತರ ಬಟ್ಟೆಗಳನ್ನು ಒದಗಿಸಬೇಕು. ನ್ಯಾಯಾಲಯದ ಯಾವುದೇ ನಿರ್ದೇಶನಕ್ಕೆ ಕಾಯದೆ ತಿಂಗಳಿಗೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಿ ಆರೋಪಿಗಳಿಗೆ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶಿಸಿದೆ.
ಇದೇ ವೇಳೆ, ಸಾಧ್ಯವಾದರೆ ಆರೋಪಿಗಳನ್ನು ಎಲ್ಲ ಆಯಾಮಗಳಿಂದ ಸುರಕ್ಷಿತವೆನಿಸಬಹುದಾದ ಸೂಕ್ತ ಸೆಲ್/ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇನ್ನು, ಜೈಲಿನಲ್ಲಿ 2024ರ ಜನವರಿಯಿಂದ ಈವರೆಗೆ ಎಷ್ಟು ಕೈದಿಗಳನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ, ಅವರಲ್ಲಿ ಎಷ್ಟು ಮಂದಿಯನ್ನು ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಳ್ಳುವಂತೆ ಕೋರಿ ಸಿಆರ್‌ಪಿಸಿ ಸೆಕ್ಷನ್ 91ರ ಅಡಿಯಲ್ಲಿ ದರ್ಶನ್, ನಾಗರಾಜು ಹಾಗೂ ಲಕ್ಷ್ಮಣ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕೋರ್ಟ್ ನೀಡಿರುವ ಕಾರಣಗಳು:
ಜೈಲು ಅಧಿಕಾರಿಗಳು ನೀಡಿರುವ ವಿವರಣೆಯ ಪ್ರಕಾರ, ಆರೋಪಿಗಳಿಗೆ ಚಾಪೆ, ಚಾದರ/ಕಂಬಳಿ, ಬೆಡ್‌ಶೀಟ್, ತಟ್ಟೆ, ಚೊಂಬು, ಬಟ್ಟಲು ಹಾಗೂ ಲೋಟ ನೀಡಲಾಗಿದೆ. ಜತೆಗೆ, ಟೆಲಿಫೋನ್, ವಿಡಿಯೊ ಕಾನ್ಫರೆನ್ಸ್‌ಗೆ ಅವಕಾಶವನ್ನೂ ಕಲ್ಪಿಸಲಾಗಿದೆ. ಜಾಮೀನು ರದ್ದುಪಡಿಸುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ಎರಡನೇ ಆರೋಪಿ ದರ್ಶನ್ ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದ, ಜೈಲು ಅಧಿಕಾರಿಗಳು ನೀಡಿರುವ ವಿವರಣೆ ತೃಪ್ತಿದಾಯಕವಾಗಿದೆ ಎಂದು ಕೋರ್ಟ್ ಹೇಳಿದೆ.
ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿಲ್ಲ ಎನ್ನುವುದು ಅರ್ಜಿದಾರ ಆರೋಪಿಗಳ ಪ್ರಮುಖ ಆರೋಪವಾಗಿದೆ. ಕಾರಾಗೃಹ ಕೈಪಿಡಿಯ ನಿಯಮ 106(iv)(d) ಪ್ರಕಾರ ಅಪೇಕ್ಷಣೀಯ ಕಾರಣಗಳ ಆಧಾರದಲ್ಲಿ ಆರೋಪಿತ ವ್ಯಕ್ತಿಗಳನ್ನು ಇತರರಿಂದ ದೂರವಿಡುವುದು ಜೈಲು ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ. ಈ ವಿಚಾರವನ್ನು ಪರಿಗಣಿಸಿದರೆ, ಇದೊಂದು ಆಂತರಿಕ ಭದ್ರತೆಯ ವ್ಯವಸ್ಥೆಯಾಗಿರುತ್ತದೆ. ಆದ್ದರಿಂದ, ಜೈಲು ಆವರಣದಲ್ಲಿನ ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಈ ಹಂತದಲ್ಲಿ ಮಧ್ಯಪ್ರವೇಶಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಾಲಯದ ನಿರ್ದೇಶನದಂತೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (ಡಿಎಲ್‌ಎಸ್‌ಎ) ಸದಸ್ಯ ಕಾರ್ಯದರ್ಶಿಗಳು ನೀಡಿರುವ ವರದಿಯಲ್ಲಿ ಆರೋಪಿತ ವ್ಯಕ್ತಿಗಳಿಗೆ ಜೈಲು ಅಧಿಕಾರಿಗಳು ಹರಿದ ಚಾದರ ನೀಡಿದ್ದರು ಎಂಬುದನ್ನು ಗಮನಿಸಲಾಗಿದೆ. ಇದೊಂದು ನಾಚಿಕೆಗೇಡಿನ ಸಂಗತಿ. ಸಾಮಾನ್ಯ ವ್ಯಕ್ತಿಯ ಬಗ್ಗೆ ಜೈಲು ಅಧಿಕಾರಿಗಳು ಸ್ವಲ್ಪ ಮಾನವೀಯತೆ ಹೊಂದಿರಬೇಕು. ನಿಯಮಗಳ ಪ್ರಕಾರ ಕಾರಾಗೃಹದಲ್ಲಿರುವವರನ್ನು ಚಳಿಗಾಲ ಹಾಗೂ ಶೀತ ವಾತಾವಾರಣದಿಂದ ರಕ್ಷಿಸಲು ಉತ್ತಮ ಚಾದರ ಹಾಗೂ ಇತರ ಬಟ್ಟೆಗಳನ್ನು ಒದಗಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಈ ಪ್ರಕರಣದಲ್ಲಿ ಡಿಎಲ್ಎಸ್‌ಎ ಸದಸ್ಯ ಕಾರ್ಯದರ್ಶಿಗಳು ವರದಿ ಸಲ್ಲಿಸಿದ್ದಾರೆ ಹಾಗೂ ಮೇಲೆ ವಿವರಿಸಲಾಗಿರುವ ಕಾರಣಗಳಿಂದಾಗಿ ಕ್ವಾರಂಟೈನ್ ಸೆಲ್‌ನಲ್ಲಿರುವ ಕೈದಿಗಳ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ತರಿಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತಿಲ್ಲ. ಈ ಎಲ್ಲ ವಾಸ್ತವಿಕ ಅಂಶಗಳನ್ನು ಪರಿಗಣಿಸಿದರೆ, ಜೈಲು ಅಧಿಕಾರಿಗಳು ಸಲ್ಲಿಸಿರುವ ವಿವರಣೆಗಳು ಸಮರ್ಪಕವಾಗಿವೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
Related Articles
Thank you for your comment. It is awaiting moderation.


Comments (0)