- ಟ್ರಯಲ್ ಕೋರ್ಟ್
- Like this post: 3
ರೇಣುಕಾಸ್ವಾಮಿ ಕೊಲೆ ಪ್ರಕರಣ; ದೀಪಕ್, ಪ್ರದೂಷ್ ವಿರುದ್ಧದ ಆರೋಪ ಕೈಬಿಡಲು ಸೆಷನ್ಸ್ ಕೋರ್ಟ್ ನಕಾರ
- by Jagan Ramesh
- September 23, 2025
- 39 Views

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಕೋರಿ ಆರೋಪಿಗಳಾದ ಎಂ. ದೀಪಕ್ ಕುಮಾರ್ ಹಾಗೂ ಎಸ್. ಪ್ರದೂಷ್ ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ ಸೆಷನ್ಸ್ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಕೊಲೆ ಪ್ರಕರಣದ 13ನೇ ಆರೋಪಿ ದೀಪಕ್ ಕುಮಾರ್ ಹಾಗೂ 14ನೇ ಆರೋಪಿ ಎಸ್. ಪ್ರದೂಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು ಅರ್ಜಿದಾರರ ವಿರುದ್ಧದ ಆರೋಪ ಕೈಬಿಡಲು ನಿರಾಕರಿಸಿದರು.
ಜತೆಗೆ, ಆರೋಪಿಗಳ ವಿರುದ್ಧ ಆರೋಪ ನಿಗದಿಗಾಗಿ ಸೆಪ್ಟೆಂಬರ್ 25ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿದ ನ್ಯಾಯಾಲಯ, ಅಂದು ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಬೇಕು ಎಂದು ಸೂಚಿಸಿತು.
ಅರ್ಜಿಯ ಹಿಂದಿನ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ವಾದ ಮಂಡಿಸಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಮ್ಮ ವಿರುದ್ಧ ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಹೊರಿಸಿರುವ ಆರೋಪಗಳಲ್ಲಿ ಹುರುಳಿಲ್ಲ. ಆರೋಪಗಳನ್ನು ದೃಢಪಡಿಸುವ ಸಾಕ್ಷ್ಯಾಧಾರಗಳು ಇಲ್ಲ. ತನಿಖಾಧಿಕಾರಿಗಳು ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಆರೋಪಗಳನ್ನು ಕೈ ಬಿಡಬೇಕು ಎಂದು ಕೋರಿದ್ದರು.
ಈ ವಾದವನ್ನು ಆಕ್ಷೇಪಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕಮಾರ್, ರೇಣುಕಾಸ್ವಾಮಿ ಮೇಲೆ ದೀಪಕ್ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ದೀಪಕ್ ಬಟ್ಟೆಯಲ್ಲಿಯೂ ರೇಣುಕಾಸ್ವಾಮಿಯ ರಕ್ತದ ಕಲೆ ಪತ್ತೆಯಾಗಿದ್ದವು. ಆತನ ಚಪ್ಪಲಿಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದವು. ಇತರ ಆರೋಪಿಗಳ ಸಂಪರ್ಕದಲ್ಲಿ ದೀಪಕ್ ಇರುವುದು ಮೊಬೈಲ್ ಕರೆಗಳ ದಾಖಲೆಗಳಿಂದ (ಸಿಡಿಆರ್) ದೃಢಪಟ್ಟಿದೆ. ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳನ್ನು ಓದುತ್ತಾ, ಆತನ ಮೇಲೆ ಹಲ್ಲೆ ನಡೆಸಲು ಇತರ ಆರೋಪಿಗಳಿಗೆ ಪ್ರದೂಷ್ ಪ್ರಚೋದನೆ ನೀಡಿದ್ದಾನೆ. ಆತನ ಪ್ಯಾಂಟ್ ಹಾಗೂ ಶರ್ಟ್ ಮೇಲೆಯೂ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿವೆ. ಆರೋಪಿ ಪ್ರದೂಷ್ ಕೊಲೆಯಲ್ಲಿ ಭಾಗಿಯಾಗಿರವುದಕ್ಕೆ ಸಾಕಷ್ಟು ಪುರಾವೆಗಳಿವೆ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕೆಂದು ಕೋರಿದ್ದರು.
Related Articles
Thank you for your comment. It is awaiting moderation.
Comments (0)