- ಟ್ರಯಲ್ ಕೋರ್ಟ್
- Like this post: 5
ಕೊಲೆ ಪ್ರಕರಣ; ಆರೋಪಿಗಳಿಂದ ಜಪ್ತಿ ಮಾಡಿದ ₹82 ಲಕ್ಷ ಐಟಿ ಇಲಾಖೆಗೆ ಹಸ್ತಾಂತರಿಸಲು ಕೋರ್ಟ್ ಆದೇಶ
- by Jagan Ramesh
- December 3, 2025
- 37 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸಾಕ್ಷ್ಯ ನಾಶಪಡಿಸಲು ಮತ್ತು ತನ್ನ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಲು ಕೆಲ ಆರೋಪಿಗಳಿಗೆ ದರ್ಶನ್ ನೀಡಿದ್ದ ಹಣದ ಮೂಲದ ಕುರಿತು ತನಿಖೆ ನಡೆಸಲು ಆದಾಯ ತೆರಿಗೆ (ಐಟಿ) ಇಲಾಖೆಗೆ ಅನುಮತಿ ನೀಡಿರುವ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಆರೋಪಿಗಳಿಂದ ವಶಪಡಿಸಿಕೊಂಡಿರುವ 82 ಲಕ್ಷ ರೂ.ಗಳನ್ನು ಐಟಿ ಇಲಾಖೆಯ ಸುಪರ್ದಿಗೆ ನೀಡುವಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನಿರ್ದೇಶಿಸಿದೆ.
ಪ್ರಕರಣದ ಆರೋಪಿಗಳಿಂದ ವಶಪಡಿಸಿಕೊಂಡಿರುವ ಸುಮಾರು 82 ಲಕ್ಷ ರೂ. ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕಿದ್ದು, ಆ ಹಣವನ್ನು ತಮ್ಮ ಸುಪರ್ದಿಗೆ ನೀಡುವಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಆದಾಯ ತೆರಿಗೆ ಇಲಾಖೆ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಐ.ಪಿ. ನಾಯಕ್ ಅವರು ಬುಧವಾರ ಪುರಸ್ಕರಿಸಿದ್ದಾರೆ.
ಇದೇ ವೇಳೆ, ಕೊಲೆಯಾದ ರೇಣುಕಾಸ್ವಾಮಿಯ ತಂದೆ-ತಾಯಿ (ಸಾಕ್ಷಿ ಸಂಖ್ಯೆ 7-8) ಅವರು ವಿಚಾರಣೆಗೆ ಹಾಜರಾಗಲು ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ಅರ್ಜಿ ಮತ್ತು 14ನೇ ಆರೋಪಿ ಪ್ರದೂಷ್ ರಾವ್ನ ಜಾಮೀನು ಅರ್ಜಿಯ ಆದೇಶವನ್ನು ಗುರುವಾರ ಪ್ರಕಟಿಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪ್ರಕರಣದ ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಹಾಯಕ ವಿಶೇಷ ಸರ್ಕಾರಿ ಅಭಿಯೋಜಕ ಸಚಿನ್, ಪ್ರಮುಖ ಸಾಕ್ಷಿಗಳಾಗಿರುವ ಮೃತ ರೇಣುಕಾಸ್ವಾಮಿಯ ತಂದೆ-ತಾಯಿಯನ್ನು ಪಾಟಿ ಸವಾಲಿಗೆ ಒಳಪಡಿಸಬೇಕಿದೆ. ಆದ್ದರಿಂದ, ವಿಚಾರಣೆಗೆ ಹಾಜರಾಗಲು ಅವರಿಗೆ ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿದರು.
ಈ ಮನವಿಯನ್ನು ತೀವ್ರವಾಗಿ ಆಕ್ಷೇಪಿಸಿದ ಪವಿತ್ರಾಗೌಡ, ದರ್ಶನ್ ಹಾಗೂ ಇತರ ಆರೋಪಿಗಳ ಪರ ವಕೀಲರು, ಪ್ರಕರಣದಲ್ಲಿ ಪಟ್ಟಿ ಮಾಡಿರುವ ಸಾಕ್ಷಿಗಳ ಪೈಕಿ, ತಾವು ಬಯಸಿದ ಸಂದರ್ಭದಲ್ಲಿ ಸಾಕ್ಷಿಗಳನ್ನು ಆಯ್ಕೆ ಮಾಡಿಕೊಂಡು (ಪಿಕ್ ಆ್ಯಂಡ್ ಚೂಸ್) ವಿಚಾರಣೆ ನಡೆಸುವುದಕ್ಕೆ ಪ್ರಾಸಿಕ್ಯೂಷನ್ಗೆ (ತನಿಖಾಧಿಕಾರಿಗಳು) ಅವಕಾಶವಿಲ್ಲ. ಮೊದಲು ದೂರುದಾರ ಹಾಗೂ ಘಟನೆಯ ಪ್ರತ್ಯಕ್ಷದರ್ಶಿಗಳಿಗೆ ಸಮನ್ಸ್ ನೀಡಿ, ಅವರ ಸಾಕ್ಷ್ಯ ದಾಖಲಿಸಿಕೊಳ್ಳಬೇಕು. ನಂತರ ಪ್ರಾಸಿಕ್ಯೂಷನ್ ಸಿದ್ಧಪಡಿಸಿರುವ ಪಟ್ಟಿಯ ಅನುಕ್ರಮದಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಸರದಿ ಪ್ರಕಾರವೇ ಸಾಕ್ಷಿಗಳಿಗೆ ಸಮನ್ಸ್ ಮಾಡಬೇಕು. ಯಾವ ಸಮಯದಲ್ಲಿ, ಯಾವ ಸಾಕ್ಷಿಯನ್ನು ವಿಚಾರಣೆಗೆ ಕರೆಸಬೇಕು, ಯಾವ ಸಾಕ್ಷಿಯ ಹೇಳಿಕೆ ದಾಖಲಿಸಿಕೊಳ್ಳಬೇಕು ಎಂಬುದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುತ್ತದೆ. ಅದನ್ನು ಪ್ರಾಸಿಕ್ಯೂಷನ್ ನಿರ್ಧರಿಸಲಾಗದು ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಸಾಕ್ಷಿಗಳ ಪಾಟಿ ಸವಾಲು ಪ್ರಕ್ರಿಯೆಯನ್ನು ಸದ್ಯಕ್ಕೆ ತಡೆಹಿಡಿಯಲು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಲು ಸ್ವತಂತ್ರರಿದ್ದಾರೆ. ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿ ಕುರಿತು ಗುರುವಾರ ತೀರ್ಮಾನ ತಿಳಿಸುವುದಾಗಿ ಹೇಳಿದರು.
ವಿಸಿ ಮೂಲಕ ವಿಚಾರಣೆಗೆ ಹಾಜರಾದ ದರ್ಶನ್:
ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ ಸೇರಿ ನ್ಯಾಯಾಂಗ ಬಂಧನದಲ್ಲಿರುವ ಎಲ್ಲ ಏಳು ಮಂದಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ವಿಚಾರಣೆಗೆ ಹಾಜರಾದರು. 4, 15 ಹಾಗೂ 17ನೇ ಆರೋಪಿಗಳಾದ ಎನ್.ರಾಘವೇಂದ್ರ, ವಿ. ಕಾರ್ತಿಕ್ ಮತ್ತು ನಿಖಿಲ್ ನಾಯಕ್ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿದ್ದ ಅರ್ಜಿಗಳನ್ನು ನ್ಯಾಯಾಲಯ ಒಪ್ಪಿತು. ಆನಂತರ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಐವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಡಿಸೆಂಬರ್ 17ರವರೆಗೆ ವಿಸ್ತರಿಸಿತು.
Related Articles
Thank you for your comment. It is awaiting moderation.


Comments (0)