ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿಗಳ ಮನವಿಗೆ ಎಸ್‌ಪಿಪಿ ಆಕ್ಷೇಪ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿದ ಆರೋಪದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿ ಮಾಡಬೇಕೆಂಬ 3ನೇ ಆರೋಪಿ ಪವನ್‌ ಮನವಿಗೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪಿ. ಪ್ರಸನ್ನ ಕುಮಾರ್ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಮುಂದುವರಿಸಿತು.

ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ಆವರಣ ಪ್ರವೇಶಿಸುವುದಕ್ಕೆ ಅನುಮತಿ ನಿರಾಕರಿಸಿದ ಬಗ್ಗೆ ವಿವರಣೆ ನೀಡುವಂತೆ ಇನ್‌ಸಪೆಕ್ಟರ್‌ಗೆ ಕೋರ್ಟ್ ನಿರ್ದೇಶಿಸಿತ್ತು. ಜತೆಗೆ ಸುಳ್ಳು ಸಾಕ್ಷ್ಯ ಸೃಷ್ಟಿ ಮಾಡಿದ್ದಕ್ಕೆ ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ‌ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿಸಬೇಕು ಎಂದು ಪವನ್ ಅರ್ಜಿ ಸಲ್ಲಿಸಿದ್ದ.

ಈ ಅರ್ಜಿಯನ್ನು ಬುಧವಾರ ಬಲವಾಗಿ ಆಕ್ಷೇಪಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ಅಪರಾಧದಲ್ಲಿ ಭಾಗಿಯಾಗಿದ್ದಲ್ಲಿ ಮಾತ್ರ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 319ರ ಅನ್ವಯ ತನಿಖಾಧಿಕಾರಿಯನ್ನು ಆರೋಪಿಯಾಗಿ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿ ಯಾವ ಕಾರಣಕ್ಕೆ ತನಿಖಾಧಿಕಾರಿಯನ್ನು ಆರೋಪಿಯನ್ನಾಗಿಸಬೇಕು, ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಮುಂದುವರಿದು, ತನಿಖೆಯ ವೇಳೆ 2024ರ ಜೂನ್ 11ರಂದು ರಾತ್ರಿ 1 ಗಂಟೆಗೆ ವಶಪಡಿಸಿಕೊಂಡ ಎಂಟು ಮೊಬೈಲ್‌ಗಳು ಆರೊಪಿಗಳದ್ದೇ ಆಗಿವೆ. ಅವುಗಳನ್ನು ಮಹಜರು ನಡೆಸಿ ಜಪ್ತಿ ಮಾಡಲಾಗಿದೆ. ಆ ಮೊಬೈಲ್‌ಗಳಿಂದ ಡಿಜಿಟಲ್ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಈ ರೀತಿಯ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವುಗಳಿಗೆ ಮಾನ್ಯತೆ ನೀಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಲು ಪವನ್ ಪರ ವಕೀಲ ಸುಧನ್ವಗೆ ಅವಕಾಶ ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸರ್ಕಾರಿ ಅಭಿಯೋಜಕರು, ವಕೀಲರ ಭೇಟಿಯಿಂದ ಕಲೆ ಹಾಕುವ ಸಾಕ್ಷ್ಯಕ್ಕೆ ಯಾವ ಮಾನ್ಯತೆ ಇದೆ. ಠಾಣೆಯಲ್ಲಿ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಯುತ್ತಿರುತ್ತವೆ. ಅತ್ಯಾಚಾರ ಹಾಗೂ ಪೋಕ್ಸೊ ಪ್ರಕರಣದ ಆರೋಪಿಗಳು ಅಲ್ಲಿ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಕೀಲರ ತಂಡಕ್ಕೆ ಠಾಣೆಗೆ ಭೇಟಿಗೆ ಅವಕಾಶ ನೀಡಲು ಹೇಗೆ ಸಾಧ್ಯ‌ ಎಂದು ಪ್ರಶ್ನಿಸಿದರು.

ದರ್ಶನ್‌ ಮನವಿಗೂ ಎಸ್‌ಪಿಪಿ ಆಕ್ಷೇಪ:
ಇದೇ ವೇಳೆ, ಪ್ರಕರಣವನ್ನು ಪ್ರತಿದಿನ ವಿಚಾರಣೆ ನಡೆಸುವಂತೆ ಕೋರಿರುವ ದರ್ಶನ್ ಅರ್ಜಿಗೆ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಪ್ರತಿದಿನ ವಿಚಾರಣೆ ಅಗತ್ಯವಿಲ್ಲ. ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಲಷ್ಟೇ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಇದೇ ನ್ಯಾಯಾಲಯದಲ್ಲಿ 977 ಪ್ರಕರಣಗಳ ವಿಚಾರಣೆ (ಟ್ರಯಲ್) ನಡೆಯುತ್ತಿವೆ. ಆ ಎಲ್ಲ ಪ್ರಕರಣಗಳನ್ನೂ ಬಿಟ್ಟು ಈ ಪ್ರಕರಣವನ್ನು ಏಕೆ ಪ್ರತಿದಿನ ವಿಚಾರಣೆ ನಡೆಸಬೇಕು? ಈಗಾಗಲೇ ವಾರಕ್ಕೆ 2 ದಿನ ವಿಚಾರಣೆ ನಡೆಯುತ್ತಿದೆ. ಅದನ್ನೇ ಮುಂದುವರಿಸಬೇಕು. ಪ್ರತಿದಿನ ವಿಚಾರಣೆಗೆ ಅವಕಾಶ ನೀಡಬಾರದು ಎಂದು ಕೋರಿದರು.

ವಿಚಾರಣೆ ವೇಳೆ ಆರೋಪಿಗಳನ್ನು ಖುದ್ದು ಕೋರ್ಟ್‌ಗೆ ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂಬ ಆರೋಪಿಗಳ ಮನವಿ ತಿರಸ್ಕರಿಸಬೇಕು. ಆರೋಪಿಗಳನ್ನ ಕೋರ್ಟ್‌ಗೆ ಹಾಜರುಪಡಿಸಿದಾಗ ಸಾಕಷ್ಟು ಜನ ಸೇರಲಿದ್ದು, ಪ್ರತಿ ಬಾರಿಯೂ ವಿಚಾರಣೆಗೆ ಹಾಜರುಪಡಿಸಿದಾಗ ಜನರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ಆರೋಪಿಗಳ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಯಲಿ ಎಂದರು.

ಜೈಲಿನೊಳಗೆ ಭೇಟಿ ಮಾಡಲು ಕುಟುಂಬಸ್ಥರಿಗೆ ಅವಕಾಶ ನೀಡಲು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಗೂ ಆಕ್ಷೇಪಿಸಿದ ಸರ್ಕಾರಿ ಅಭಿಯೋಜಕರು, ಜೈಲಿನೊಳಗಿನ ಸಂದರ್ಶನಕ್ಕೆ ಅವಕಾಶ ಕೋರಿ ಆರೋಪಿಗಳು ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿಲ್ಲ.‌ ಜೈಲು ಕೈಪಿಡಿ ಪ್ರಕಾರ ಜೈಲು ಅಧಿಕಾರಿಗಳಿಗೆ ಮೊದಲು ಮನವಿ ಮಾಡಬೇಕು. ಆ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಸಣ್ಣಪುಟ್ಟ ವಿಚಾರಕ್ಕೂ ದರ್ಶನ್ ಪದೇಪದೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ಹಾಳು ಮಾಡುತ್ತಿದ್ದಾರೆ. ಆದ್ದರಿಂದ, ಅವರ ಅರ್ಜಿಗೆ ಮಾನ್ಯತೆ ನೀಡಬಾರದು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಲಯ, ಅಂತಿಮವಾಗಿ ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿತು‌.

Related Articles

Comments (0)

Leave a Comment