ಅತ್ಯಾಚಾರ ಪ್ರಕರಣ; ಶಾಸಕ‌ ಮುನಿರತ್ನ 14 ದಿನ ನ್ಯಾಯಾಂಗ ಬಂಧನಕ್ಕೆ

ಬೆಂಗಳೂರು: ಅತ್ಯಾಚಾರ ಆರೋಪ‌ ಪ್ರಕರಣದಲ್ಲಿ ಬಿಜೆಪಿ ಶಾಸಕ‌ ಮುನಿರತ್ನ ಅವರನ್ನು ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಆದೇಶಿಸಿದೆ.

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರು ಆಧರಿಸಿ ಮುನಿರತ್ನ ಅವರನ್ನು ಪೊಲೀಸರು ಶುಕ್ರವಾರ (ಸೆ.20) ಬೆಳಗ್ಗೆ ವಶಕ್ಕೆ ಪಡೆದಿದ್ದರು. ಮುನಿರತ್ನ ಅವರನ್ನು ಶನಿವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಕೆಲಕಾಲ ಮುನಿರತ್ನ ಪರ ವಕೀಲರ ವಾದ ಆಲಿಸಿದ ಮ್ಯಾಜಿಸ್ಟ್ರೇಟ್, ಆರೋಪಿಯನ್ನು ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಇದಕ್ಕೂ ಮುನ್ನ ಮುನಿರತ್ನ‌ ಪರ ವಕೀಲರು ವಾದ ಮಂಡಿಸಿ, ಈ ಪ್ರಕರಣದಲ್ಲಿ ಸುದ್ದಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಅನಪೇಕ್ಷಿತವಾಗಿದೆ. ಗುರುವಾರ ರಾತ್ರಿ 9.30ಕ್ಕೆ ಎಫ್ಐಆರ್ ದಾಖಲಾಗಿದೆ. ಮರುದಿನ ಬೆಳಿಗ್ಗೆಯೇ ಈ ಎಫ್ಐಆರ್ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿತ್ತು. ಎಫ್ಐಆರ್ ದಾಖಲಾಗುವ ಮುನ್ನವೇ ಮಾಧ್ಯಮಗಳಲ್ಲಿ ಎಲ್ಲವೂ ಬಿತ್ತರಗೊಂಡು ಬಿಡುತ್ತದೆ. ಪ್ರಕರಣವನ್ನು ಮಾಧ್ಯಮದವರು ತನಿಖೆ ಮಾಡುತ್ತಾರೆಯೋ ಅಥವಾ ಪೊಲೀಸರೋ ಎಂಬುದೇ ಗೊತ್ತಾಗುತ್ತಿಲ್ಲ. ಈ ಮಾಹಿತಿಯೆಲ್ಲಾ ಹೇಗೆ ಸೋರಿಕೆ ಆಗುತ್ತಿದೆ ಎಂಬ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಎಂದು ಮನವಿ‌ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ಸಂಬಂಧ ನಿಮ್ಮ ದೂರು ಸಲ್ಲಿಸಿ ಎಂದು ಸೂಚಿಸಿದರು.

Related Articles

Comments (0)

Leave a Comment