- ಟ್ರಯಲ್ ಕೋರ್ಟ್
- Like this post: 3
ಮುಡಾ ಹಗರಣದ ತನಿಖೆಗೆ ಕೋರಿ ಖಾಸಗಿ ದೂರು
- by Jagan Ramesh
- August 14, 2024
- 94 Views
ಬೆಂಗಳೂರು: ರಾಜ್ಯದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆಯಾಗಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜೆ ದೇವರಾಜು ಹಾಗೂ ಇತರರ ಹೆಸರಿನಡಿ ಐವರನ್ನು ಆರೋಪಿಗಳನ್ನಾಗಿಸಲಾಗಿದೆ. ದೂರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸ್ವೀಕರಿಸಿದ್ದು, ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ಗಳಾದ 120ಬಿ, 166, 403, 406, 420, 426, 465, 468, 340, 351 (ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ಗಳಾದ 61, 188, 314, 316, 318, 324, 336, 340, ಮತ್ತು 351), ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಸೆಕ್ಷನ್ 9 ಹಾಗೂ 13, ಬೇನಾಮಿ ಆಸ್ತಿ ವರ್ಗಾವಣೆ ನಿಷೇಧ ಕಾಯ್ದೆ 1988 ಮತ್ತು ಕರ್ನಾಟಕ ಭೂಮಿ ವಶ ಕಾಯ್ದೆ 2011ರ ಸೆಕ್ಷನ್ 3 ಮತ್ತು 4ರ ಅಡಿ ಸಂಜ್ಞೇ ಪರಿಗಣಿಸಿ, ರಾಜ್ಯ ಸರ್ಕಾರ/ಲೋಕಾಯುಕ್ತ ಪೊಲೀಸ್ ವಿಭಾಗದ ಅಡಿಗೆ ಬಾರದ ಯಾವುದೇ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಸಿಬಿಐಗೆ ಸಿಆರ್ಪಿಸಿ ಸೆಕ್ಷನ್ 202 ಜತೆಗೆ ಬಿಎನ್ಎಸ್ಎಸ್ ಸೆಕ್ಷನ್ 225 ಅಡಿ ತನಿಖೆ ನಡೆಸಲು ಆದೇಶಿಸಬೇಕು. ಆನಂತರ, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ, ಕಾನೂನಿನ ಅಡಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಕೋರಲಾಗಿದೆ.
ಅಲ್ಲದೇ, ಸಿಆರ್ಪಿಸಿ ಸೆಕ್ಷನ್ 156 (3) ಜೊತೆಗೆ ಬಿಎನ್ಎಸ್ಎಸ್ ಸೆಕ್ಷನ್ 175 (3) ಅಡಿ ಲೋಕಾಯುಕ್ತ ಪೊಲೀಸ್ ಘಟಕಕ್ಕೆ ತನಿಖೆ ನಡೆಸಿ, ವರದಿ ಸಲ್ಲಿಸಲು ಆದೇಶಿಸಬೇಕು. ಆನಂತರ ಅದನ್ನು ಸಂಜ್ಞೇ ಪರಿಗಣಿಸಿ, ಕಾನೂನಿನ ಅನ್ವಯ ಶಿಕ್ಷೆಗೆ ಗುರಿಪಡಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ವಸಂತ್ ಕುಮಾರ್ ವಕಾಲತ್ತು ಹಾಕಿದ್ದಾರೆ.
Related Articles
Thank you for your comment. It is awaiting moderation.
Comments (0)