- ಟ್ರಯಲ್ ಕೋರ್ಟ್
- Like this post: 5
ಕೊಲೆ ಪ್ರಕರಣ; ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿ ಪಾಲಕರಿಗೆ ಸಮನ್ಸ್ ಜಾರಿ ಮಾಡಿದ ಸೆಷನ್ಸ್ ಕೋರ್ಟ್
- by Jagan Ramesh
- December 4, 2025
- 9 Views
ಬೆಂಗಳೂರು: ನಟ ದರ್ಶನ್ ಆರೋಪಿಯಾಗಿರುವ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಕೊಲೆಯಾದ ರೇಣುಕಾಸ್ವಾಮಿಯ ಪಾಲಕರಿಗೆ ಸಮನ್ಸ್ ಜಾರಿಗೊಳಿಸಿರುವ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.
ಪ್ರಕರಣ ಸಂಬಂಧ ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮಗೆ (ಸಾಕ್ಷಿ ಸಂಖ್ಯೆ 7 ಹಾಗೂ 8) ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಪುರಸ್ಕರಿಸಿರುವ ನ್ಯಾಯಾಧೀಶ ಐ.ಪಿ. ನಾಯಕ್ ಅವರು ಈ ಆದೇಶ ಮಾಡಿದ್ದಾರೆ.
ದರ್ಶನ್ ಸೇರಿ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ, ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಇನ್ನಿತರ ಆರೋಪಗಳನ್ನು ನಿಗದಿಪಡಿಸಿ ನವೆಂಬರ್ 3ರಂದು ನ್ಯಾಯಾಲಯ ಆದೇಶಿಸಿತ್ತು. ಜತೆಗೆ ನವೆಂಬರ್ 10ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಅದಾದ ಬಳಿಕ ಪ್ರಕರಣ ಕುರಿತು ನ್ಯಾಯಾಲಯ ನಡೆಸುತ್ತಿರುವ ಮೊದಲ ಸಾಕ್ಷಿ ವಿಚಾರಣೆ ಇದೇ ಆಗಿದೆ. ಕೋರ್ಟ್ ಸೂಚನೆಯಂತೆ ಡಿಸೆಂಬರ್ 17ರಂದು ರೇಣುಕಾಸ್ವಾಮಿಯ ತಂದೆ-ತಾಯಿ ವಿಚಾರಣೆಗೆ ಖುದ್ದು ಹಾಜರಾಗಿ, ಸಾಕ್ಷ್ಯ ನುಡಿಯಬೇಕಿದೆ.
ರೇಣುಕಾಸ್ವಾಮಿ ಪಾಲಕರ ಸಾಕ್ಷ್ಯ ದಾಖಲಿಸಬೇಕೆಂಬ ಪ್ರಾಸಿಕ್ಯೂಷನ್ ಮನವಿಗೆ ಆಕ್ಷೇಪಿಸಿದ್ದ ದರ್ಶನ್ ಮತ್ತಿತರ ಆರೋಪಿಗಳ ಪರ ವಕೀಲರು, ಮೊದಲಿಗೆ ದೂರುದಾರರು, ಪ್ರತ್ಯಕ್ಷ ದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿ ವಿಚಾರಣೆ ನಡೆಸುವುದು ಕಡ್ಡಾಯ. ನಂತರವಷ್ಟೇ ಪ್ರಕರಣದ ಸಾಕ್ಷಿಗಳು ಅಂದರೆ ಮೃತನ ತಂದೆ-ತಾಯಿಯ ಸಾಕ್ಷಿಗಳ ವಿಚಾರಣೆ ನಡೆಸಬೇಕು. ಆದ್ದರಿಂದ, ತನಿಖಾಧಿಕಾರಿಗಳ ಮನವಿ ತಿರಸ್ಕರಿಸಬೇಕು. ಮೊದಲಿಗೆ ದೂರುದಾರರು, ಪ್ರತ್ಯಕ್ಷ ದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿಗಳ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಮನವಿ ತಳ್ಳಿಹಾಕಿದ ಕೋರ್ಟ್:
ಆರೋಪಿಗಳ ಪರ ವಕೀಲರ ಮನವಿ ಒಪ್ಪದ ನ್ಯಾಯಾಲಯ, ಪ್ರಾಸಿಕ್ಯೂಷನ್ ಮನವಿಯಂತೆ ಸಾಕ್ಷಿಗಳ ವಿರುದ್ಧ ಸಮನ್ಸ್ ಹೊರಡಿಸಿ, ನಂತರ ಅವರ ಸಾಕ್ಷ್ಯ ದಾಖಲಿಸಿಕೊಳ್ಳುವುದು ಕೋರ್ಟ್ನ ಕರ್ತವ್ಯ. ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 131(1) ಪ್ರಕಾರ ಪ್ರಾಸಿಕ್ಯೂಷನ್ ಪರವಾಗಿ ಹಾಜರುಪಡಿಸಬಹುದಾದಂತಹ ಸಾಕ್ಷಿಯನ್ನು ತೆಗೆದುಕೊಳ್ಳಬಹುದಾಗಿದೆ. ಅದರರ್ಥ ಆ ಸಾಕ್ಷಿಯನ್ನು ಅಥವಾ ಈ ಸಾಕ್ಷಿಯನ್ನು ಮೊದಲಿಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್ಗೆ ನ್ಯಾಯಾಲಯ ನಿರ್ದೇಶನ ನೀಡುವಂತಿಲ್ಲ. ಆದ್ದರಿಂದ, ಆರೋಪಿಗಳ ವಾದಕ್ಕೆ ಮಾನ್ಯತೆ ಇಲ್ಲವಾಗಿದೆ. ಆದರೆ, ತಮ್ಮ ಪ್ರತಿವಾದದ (ಡಿಫೆನ್ಸ್) ರಕ್ಷಣೆಗಾಗಿ ಸಾಕ್ಷಿಗಳ ಪಾಟಿ ಸವಾಲು ಪ್ರಕ್ರಿಯೆ ಮುಂದೂಡಲು ಕೋರಿ ಅರ್ಜಿ ಸಲ್ಲಿಸಲು ಆರೋಪಿಗಳು ಸ್ವತಂತ್ರರಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಾಸಿಕ್ಯೂಷನ್ ಸಾಕ್ಷಿಯನ್ನು ವಿಚಾರಣೆ ನಡೆಸಿದ ದಿನವೇ ಆರೋಪಿಗಳು ಪಾಟಿ ಸವಾಲು ಪ್ರಕ್ರಿಯೆ ನಡೆಸಬಹುದು. ಒಂದೊಮ್ಮೆ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ವಿಚಾರಣೆ ನಡೆಸಿದ ನಂತರ, ಅದು ಆರೋಪಿಗಳ ಪ್ರತಿವಾದದ (ಡಿಫೆನ್ಸ್) ಮೇಲೆ ಪರಿಣಾಮ ಉಂಟು ಮಾಡುವಂತಿದ್ದರೆ, ಆಗ ನ್ಯಾಯಾಲಯವು ತನ್ನ ವಿವೇಚನಾಧಿಕಾರ ಬಳಸಿ ಪಾಟಿ ಸವಾಲು ಪ್ರಕ್ರಿಯೆ ಮುಂದೂಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪ್ರದೂಷ್ ರಾವ್ಗೆ 4 ದಿನ ಜಾಮೀನು:
ಇತ್ತೀಚೆಗೆ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ತಿಥಿ ಕಾರ್ಯ ನೆರವೇರಿಸಲು ಡಿಸೆಂಬರ್ 4ರಿಂದ 23ರವರೆಗೆ ಜಾಮೀನು ನೀಡಬೇಕು ಎಂದು ಕೋರಿ ಪ್ರಕರಣದ 14ನೇ ಆರೋಪಿ ಪ್ರದೂಷ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಡಿಸೆಂಬರ್ 4ರಿಂದ 7ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಮೃತರಿಗೆ ಪ್ರದೂಷ್ ಏಕೈಕ ಪುತ್ರನಾಗಿದ್ದು, ತಂದೆ ಮರಣದ ನಂತರ ತನ್ನ ಮೇಲಿನ ಹೊಣೆಗಾರಿಕೆಯನ್ನು ಅವರು ನಿರ್ವಹಿಸಬೇಕಿದೆ. ಆದ್ದರಿಂದ, ಮಧ್ಯಂತರ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ಟಿವಿ ವೀಕ್ಷಣೆಗೆ ಅನುಮತಿ:
ಖಿನ್ನತೆಯಿಂದ ಹೊರಬರಲು ಸೆಲ್ನಲ್ಲಿ ಟಿವಿ ಅಳವಡಿಸಬೇಕು ಎಂದು ಪ್ರಕರಣದ 12ನೇ ಆರೋಪಿ ಲಕ್ಷ್ಮಣ್ ಬುಧವಾರ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಜೈಲು ಕೈಪಿಡಿ ಮತ್ತು ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲ್ಲಿಸಿರುವ ವರದಿ ಪ್ರಕಾರ, ಪ್ರಕರಣದ ಆರೋಪಿಗಳಾದ ದರ್ಶನ್, ಜಗದೀಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೂಷ್ ರಾವ್ ಅವರಿರುವ ಜೈಲಿನ ಸೆಲ್ನಲ್ಲಿ ಟಿ.ವಿ ಅಳವಡಿಸಿ, ವೀಕ್ಷಿಸಲು ಅನುಮತಿಸಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.
Related Articles
Thank you for your comment. It is awaiting moderation.


Comments (0)