- ಟ್ರಯಲ್ ಕೋರ್ಟ್
- Like this post: 5
ಮುಡಾ ಹಗರಣ; ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಡಿ.18ರವರೆಗೆ ಗಡುವು ನೀಡಿದ ಕೋರ್ಟ್
- by Jagan Ramesh
- December 4, 2025
- 9 Views
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬದ ಕೆಲ ಸದಸ್ಯರು ಪ್ರಮುಖ ಆರೋಪಿಗಳಾಗಿರುವ ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣದ ತನಿಖೆ ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವ ಲೋಕಾಯುಕ್ತ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಡಿಸೆಂಬರ್ 18ರ ಒಳಗೆ ಅಂತಿಮ ತನಿಖಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ಗುರುವಾರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ತನಿಖಾಧಿಕಾರಿಗಳಿಗೆ ಕೊನೇ ಅವಕಾಶವಾಗಿ ಡಿಸೆಂಬರ್ 18ರ ವರೆಗೆ ಗಡುವು ನೀಡಿದರು.
ಆದೇಶವೇನು?
ಲೋಕಾಯುಕ್ತ ಪರ ವಿಶೇಷ ಅಭಿಯೋಜಕರು (ಎಸ್‌ಪಿಪಿ) ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ. ಈ ನ್ಯಾಯಾಲಯವು 2025ರ ಅಕ್ಟೋಬರ್ 9ರಂದು ಪ್ರಕರಣದ ತನಿಖೆ ಪೂರ್ಣಗೊಳಿಸಲು ತನಿಖಾಧಿಕಾರಿಗಳಿಗೆ ಗರಿಷ್ಠ 2 ತಿಂಗಳ ಕಾಲಾವಕಾಶ ನೀಡಿತ್ತು. ತನಿಖೆಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಹಾಗೂ 2 ತಿಂಗಳ ಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಅಕ್ಟೋಬರ್ 9ರ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಂದ ಮಾತ್ರಕ್ಕೆ ನ್ಯಾಯಾಲಯ ನೀಡಿರುವ ಗಡುವಿನ ಕೊನೆಯ ದಿನಾಂಕದಂದೇ ತನಿಖಾ ಸಂಸ್ಥೆಯು ತನಿಖೆಯನ್ನು ಪೂರ್ಣಗೊಳಿಸಬೇಕು ಎಂದರ್ಥವಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಲು ತನಿಖಾಧಿಕಾರಿಗಳು ಸಮರೋಪಾದಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿಪಿ ಹೇಳಿದ್ದಾರೆ. ಈ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಮತ್ತಾವುದೇ ಕಾರಣಕ್ಕೂ ಪ್ರಕರಣವನ್ನು ಮುಂದೂಡಲು ಸಾಧ್ಯವಿಲ್ಲ. ಇಂಥ ಸನ್ನಿವೇಶದಲ್ಲಿ ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಬಿ ರಿಪೋರ್ಟ್ ಮೇಲಿನ ಆದೇಶ ಹೊರಡಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಒಂದೊಮ್ಮೆ ಮುಂದಿನ ವಿಚಾರಣಾ ದಿನಾಂಕದ ಒಳಗೆ ತನಿಖೆ ಪೂರ್ಣಗೊಳಿಸಿದರೆ, ಮುಂಚಿತವಾಗಿ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲು ತನಿಖಾಧಿಕಾರಿಗಳು ಕೋರಬಹುದು. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಜತೆಗೆ ದೂರುದಾರರಿಗೂ ಪ್ರತಿಯನ್ನು ಒದಗಿಸಬೇಕು. ದೂರುದಾರರು, ಎಸ್‌ಪಿಪಿ ಹಾಗೂ ಇಡಿ ಅಧಿಕಾರಿಗಳು ಯಾವುದೇ ಲಿಖಿತ ಸಾರಾಂಶಗಳಿದ್ದರೆ ಅವುಗಳನ್ನು ಡಿಸೆಂಬರ್ 16ರ ಒಳಗೆ ಸಲ್ಲಿಸಬಹುದು ಎಂದು ತಿಳಿಸಿದ ನ್ಯಾಯಾಲಯ, ವಿಚಾರಣೆಯನ್ನು ಡಿಸೆಂಬರ್ 18ಕ್ಕೆ ಮುಂದೂಡಿದೆ.
Related Articles
Thank you for your comment. It is awaiting moderation.


Comments (0)