ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣ; ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದ ಜನಪ್ರತಿನಿಧಿಗಳ ಕೋರ್ಟ್

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ತನಿಖೆ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ವಿಚಾರಣೆ ನಡೆಸಿ‌ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಬುಧವಾರ ಮಧ್ಯಾಹ್ನ ತೆರೆದ ನ್ಯಾಯಾಲಯದಲ್ಲಿ ಉಕ್ತಲೇಖನದ ಮೂಲಕ ಆದೇಶಿಸಿದರು.

ಪ್ರಕರಣದ ಸಂಬಂಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಅಸಿ) ಅಡಿಯಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ಖಾಸಗಿ ದೂರಿನಲ್ಲಿ ಹೆಸರಿಸಲಾಗಿರುವ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು. ತನಿಖಾ ವರದಿಯನ್ನು 3 ತಿಂಗಳೊಳಗೆ ಸಲ್ಲಿಸಬೇಕು ಎಂದು ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮೋದನೆ ನೀಡಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಮಂಗಳವಾರ ಎತ್ತಿ ಹಿಡಿದಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯ್ದೆ – 1988ರ ಸೆಕ್ಷನ್ 17 ಎ ಅಡಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಬುಧವಾರ ಬೆಳಗ್ಗೆ ತಮ್ಮ ವಕೀಲರಾದ ಲಕ್ಷ್ಮೀ ಅಯ್ಯಂಗಾರ್ ಅವರ ಮುಖಾಂತರ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರಿಗೆ ಸಲ್ಲಿಸಿದರು.

ಕೆಲಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶರು ಖಾಸಗಿ ದೂರಿನ ಅನುಸಾರ ಕ್ರಿಮಿನಲ್ ಪ್ರಕರಣದ ಆರೋಪಿಯಾಗಿ ಸಿದ್ದರಾಮಯ್ಯ ವಿರುದ್ಧ ಸಿಆರ್‌ಪಿಸಿ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದರು.

Related Articles

Comments (0)

Leave a Comment