- ಟ್ರಯಲ್ ಕೋರ್ಟ್
- Like this post: 0
ಅಕ್ರಮ ಹಣ ವರ್ಗಾವಣೆ ಪ್ರಕರಣ; ಶಾಸಕ ವೀರೇಂದ್ರ ಪಪ್ಪಿ ಇ.ಡಿ ಕಸ್ಟಡಿ ಸೆ.4ರ ವರೆಗೆ ವಿಸ್ತರಣೆ
- by Ramya B T
- August 28, 2025
- 6 Views

ಬೆಂಗಳೂರು: ಆನ್‌ಲೈನ್ ಮನಿ ಗೇಮ್ಸ್ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಹಾಗೂ ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಅಲಿಯಾಸ್ ವೀರೇಂದ್ರ ಪಪ್ಪಿ ಅವರ ಜಾರಿ ನಿರ್ದೇಶನಾಲಯದ (ಇಡಿ) ಕಸ್ಟಡಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 4ರವರೆಗೆ ವಿಸ್ತರಿಸಿದೆ.
ವೀರೇಂದ್ರ ಪಪ್ಪಿ ಅವರ ಐದು ದಿನಗಳ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರ ಮುಂದೆ ಗುರುವಾರ ಹಾಜರುಪಡಿಸಲಾಯಿತು.
ಜಾರಿ ನಿರ್ದೇಶನಾಲಯದ ಪರ ವಿಶೇಷ ಸರ್ಕಾರಿ ಅಭಿಯೋಜಕ ಐ.ಎಸ್. ಪ್ರಮೋದ್ ಚಂದ್ರ ವಾದ ಮಂಡಿಸಿ, ವಡೋದರಾ, ಹೈದರಾಬಾದ್ ಮತ್ತು ಇತರೆಡೆ ದಾಖಲಾಗಿರುವ ಎಫ್‌ಐಆರ್‌ಗಳ ಸಂಬಂಧ ತನಿಖೆ ನಡೆಯುತ್ತಿದ್ದು, ಪ್ರಕರಣದಲ್ಲಿ ಬೇರೆ ಆರೋಪಿಗಳು ವೀರೇಂದ್ರ ಪಪ್ಪಿ ಅವರ ಹೆಸರು ಬಾಯ್ಬಿಟ್ಟಿದ್ದಾರೆ. ಆದ್ದರಿಂದ, ಅವರನ್ನು ಮತ್ತೆ 14 ದಿನಗಳ ಕಾಲ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ವೀರೇಂದ್ರ ಪಪ್ಪಿ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಚ್.ಎಸ್. ಚಂದ್ರಮೌಳಿ ಹಾಗೂ ಕಿರಣ್ ಜವಳಿ ಅವರು, ವೀರೇಂದ್ರ ಅವರಿಗೆ ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆ ಇಲ್ಲ. ಅವರ ವಿರುದ್ಧ ಯಾವುದೇ ಪ್ರಕರಣ ಬಾಕಿ ಇಲ್ಲ. ತನಿಖೆಗೆ ಅವರ ಅಗತ್ಯವಿದ್ದರೆ ಬೆಳಗ್ಗೆಯಿಂದ ಸಂಜೆಯವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿ ಬಿಡುಗಡೆ ಮಾಡಬಹುದು. ಇದಕ್ಕಾಗಿ ಕಸ್ಟಡಿಗೆ ನೀಡುವ ಅಗತ್ಯವಿಲ್ಲ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಆರೋಪಿ ವೀರೇಂದ್ರ ಅವರನ್ನು ಮತ್ತೆ 6 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿತು.
Related Articles
Thank you for your comment. It is awaiting moderation.
Comments (0)