ನಕಲಿ ವೋಟರ್ ಐಡಿ ತಯಾರಿಕೆ ಆರೋಪ; ರಿಜ್ವಾನ್‌ ಅರ್ಷದ್‌ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ಸೆ.19ಕ್ಕೆ ಮುಂದೂಡಿಕೆ

ಬೆಂಗಳೂರು: ಮತದಾರರ ನಕಲಿ ಗುರುತಿನ ಚೀಟಿ ತಯಾರಿಸುತ್ತಿದ್ದಾರೆಂದು ತಮ್ಮ ವಿರುದ್ಧ ಆರೋಪಿಸಿದ್ದ ರಾಜ್ಯ ಬಿಜೆಪಿ ವಿರುದ್ಧ ಶಿವಾಜಿನಗರದ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ಸಲ್ಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದ ಪಾಟೀ ಸವಾಲು ಪ್ರಕ್ರಿಯೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 19ಕ್ಕೆ ನಿಗದಿಪಡಿಸಿದೆ.

ರಿಜ್ವಾನ್ ಅರ್ಷದ್ ಸಲ್ಲಿಸಿದ್ದ ಖಾಸಗಿ ದೂರಿನ ಕುರಿತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್‌. ಶಿವಕುಮಾರ್ ಅವರು ಶುಕ್ರವಾರ ವಿಚಾರಣೆ ನಡೆಸಿದರು. ರಿಜ್ವಾನ್‌ ಪರ ವಕೀಲರಾದ ಸೂರ್ಯ ಮುಕುಂದರಾಜ್‌ ಮತ್ತು ಸಂಜಯ್ ಯಾದವ್‌, ಅರ್ಜಿದಾರರು ಪಾಟೀ ಸವಾಲಿಗೆ ಒಳಪಡಲು ಸಿದ್ಧರಿದ್ದು ಪ್ರಕ್ರಿಯೆ ಕೈಗೆತ್ತಿಕೊಳ್ಳುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಪ್ರತಿವಾದಿಯಾದ ಬಿಜೆಪಿ ರಾಜ್ಯ ಘಟಕ ಮತ್ತು ಬಿಜೆಪಿ ಐಟಿ ಘಟಕದ ಅಧ್ಯಕ್ಷರ ಪರ ಹಾಜರಿದ್ದ ಹಿರಿಯ ವಕೀಲ ಚಲಪತಿ ಶ್ರೀನಿವಾಸ್ ಮತ್ತು ಎನ್. ಗೋಪಿ ಅವರು ಕಾಲಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಪ್ರಕರಣವನ್ನು ಅರ್ಜಿದಾರರ ಪಾಟೀ ಸವಾಲಿನ ಪ್ರಕ್ರಿಯೆಗೆ ನಿಗದಿಪಡಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 19ಕ್ಕೆ ಮುಂದೂಡಿದರು.

ಪ್ರಕರಣವೇನು?
ರಿಜ್ವಾನ್‌ ಅರ್ಷದ್‌ 2019ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ (ಸೆಂಟ್ರಲ್‌) ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ಅವರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಯೂತ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಂ ಖಲೀಲುಲ್ಲಾ ಅವರನ್ನು ಬಿಜೆಪಿ ಮಾಡಿದ್ದ ಆರೋಪದಡಿ ಬಂಧಿಸಲಾಗಿತ್ತು.

ಈ ಕುರಿತು 2019ರ ಏಪ್ರಿಲ್ 15ರಂದು ಬಿಜೆಪಿ ಕರ್ನಾಟಕ ಟ್ವಿಟರ್ ಹ್ಯಾಂಡಲ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿ, ಇಬ್ರಾಹಿಂ ಖಲೀಲುಲ್ಲಾ ಅವರು ರಿಜ್ವಾನ್‌ ಅರ್ಷದ್‌ ಪರವಾಗಿ ಕೆಜಿ‌ ರಸ್ತೆಯ ಪ್ರಭಾತ್‌ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯ ಕೊಠಡಿ ಸಂಖ್ಯೆ 507ರಲ್ಲಿ ನಕಲಿ ಮತದಾರರ ಗುರುತಿನ ಚೀಟಿಗಳನ್ನು ಮುದ್ರಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿತ್ತರಿಸಿದ್ದ ಬಿಜೆಪಿ, ರಿಜ್ವಾನ್‌ ಅರ್ಷದ್ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.

ಇದರಿಂದ, 2019ರ ಮೇ 22ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದ ರಿಜ್ವಾನ್‌ ಅರ್ಷದ್, ಯಾವುದೇ ಅಕ್ರಮ ನಡೆದಿಲ್ಲವೆಂದು ಮುಖ್ಯ ಚುನಾವಣಾಧಿಕಾರಿಗಳೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ನನ್ನ ಘನತೆಗೆ ಧಕ್ಕೆ ತರುವ ಏಕೈಕ ಉದ್ದೇಶದಿಂದ ಬಿಜೆಪಿ ಸುಳ್ಳು ಹಾಗೂ ಆಧಾರರಹಿತ ವಿಷಯವನ್ನು ಹಬ್ಬಿಸಿದೆ. ಇದರಿಂದ, ನನಗೆ, ನನ್ನ ಕುಟುಂಬ ಸದಸ್ಯರಿಗೆ, ನನ್ನ ಪಕ್ಷ ಹಾಗೂ ಪಕ್ಷದ ಕಾರ್ಯಕರ್ತರಿಗೆ ಮಾನಸಿಕ ಹಿಂಸೆಯಾಗಿದೆ. ಆದ್ದರಿಂದ, ಆರೋಪಿಗಳಾದ ಬಿಜೆಪಿಯ ರಾಜ್ಯ ಘಟಕದ ಅಂದಿನ ಅಧ್ಯಕ್ಷರು ಹಾಗೂ ಐಟಿ ಸೆಲ್‌ ಅಧ್ಯಕ್ಷರ ವಿರುದ್ಧ ಐಪಿಸಿ ಸೆಕ್ಷನ್ 499 (ಮಾನಹಾನಿ), ಸೆಕ್ಷನ್ 500 (ಮಾನಹಾನಿಗೆ ಶಿಕ್ಷೆ) ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Related Articles

Comments (0)

Leave a Comment