ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಗೆ ಕೋರಿದ್ದ ಅರ್ಜಿ ವಿಚಾರಣೆ ಪೂರ್ಣ; ಆದೇಶ ಕಾಯ್ದಿರಿಸಿದ ಕೆಎಟಿ

ಬೆಂಗಳೂರು: ಪ್ರಶ್ನೆ ಪತ್ರಿಕೆ ಅನುವಾದದಲ್ಲಿ ಲೋಪಗಳಾಗಿದ್ದ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಎ ಮತ್ತು ಬಿ ವೃಂದದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪೂರ್ಣಗೊಳಿಸಿದೆ.

ಪವಿತ್ರಾ ಮತ್ತಿತರ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ಕುರಿತು ಗುರುವಾರ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಂಗ ಸದಸ್ಯ ಎಸ್‌.ವೈ. ವಟವಟಿ ಮತ್ತು ಆಡಳಿತ ಸದಸ್ಯೆ ಡಾ.ಅಮಿತಾ ಪ್ರಸಾದ್‌ ಅವರಿದ್ದ ಕೆಎಟಿ ನ್ಯಾಯಪೀಠ, ಅರ್ಜಿ ಕುರಿತ ಆದೇಶ ಕಾಯ್ದಿರಿಸಿತಲ್ಲದೆ, ಪರೀಕ್ಷೆಯ ಪ್ರಶ್ನೆಗಳಲ್ಲಿ ಆಗಿದ್ದ ಲೋಪಗಳನ್ನು ಪರಿಶೀಲಿಸಲು ರಚಿಸಲಾಗಿದ್ದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆಯೋಗಕ್ಕೆ ನಿರ್ದೇಶಿಸಿತು. ಇದೇ ವೇಳೆ, ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಅಮಾನತಿನಲ್ಲಿರಿಸಿ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನೂ ಕೆಎಟಿ ವಿಸ್ತರಿಸಿತು.

ಕೆಪಿಎಸ್‌ಸಿ ವಾದವೇನು?
ಇದಕ್ಕೂ ಮುನ್ನ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ರೂಬೆನ್‌ ಜಾಕೊಬ್‌, ಮರು ಪರೀಕ್ಷೆ ನಡೆಸಿದಾಗ ಪ್ರಾವಿಷನಲ್‌ ಕೀ ಉತ್ತರಗಳನ್ನು ಪ್ರಕಟಿಸಲಾಗಿತ್ತು. ಅದಕ್ಕೆ ಬಂದ ಆಕ್ಷೇಪಣೆಗಳನ್ನು ಪರಿಗಣಿಸಿ ಆಯೋಗವೇ ಎಲ್ಲೆಲ್ಲಿ ಅನುವಾದಗಳಲ್ಲಿ ಲೋಪವಾಗಿದೆ ಎಂಬ ಬಗ್ಗೆ ಪರಿಶೀಲಿಸಲು ಕೀ ಉತ್ತರಗಳು ಮತ್ತು ಪ್ರಶ್ನೆಗಳನ್ನು ತಜ್ಞರಿಗೆ ಕಳುಹಿಸಿಕೊಟ್ಟಿತ್ತು. ತಜ್ಞರ ವರದಿ ನಂತರ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಆಗಿರುವ ಸಣ್ಣ ದೋಷಗಳನ್ನು ಸರಿಪಡಿಸಲು ಕೃಪಾಂಕ ನೀಡಲಾಗಿದೆ ಎಂದು ವಿವರಿಸಿದರು.

ಸುಪ್ರೀಂಕೋರ್ಟ್‌ ಈ ಹಿಂದೆ ನೀಡಿರುವ ತೀರ್ಪಿನಂತೆ ತಜ್ಞರ ಸಮಿತಿ ನೀಡಿರುವ ವರದಿಯನ್ನು ಮರುಪರಿಶೀಲಿಸುವ ಅಧಿಕಾರ ಕೆಎಟಿಗೆ ಇಲ್ಲ. ಆದ್ದರಿಂದ, ನ್ಯಾಯಾಲಯ ಅರ್ಜಿದಾರರ ವಾದ ಮಾನ್ಯ ಮಾಡಬಾರದು. ಗೆಜೆಟೆಡ್‌ ಪ್ರೊಬೇಷನರಿಯಂತಹ ಹುದ್ದೆಗಳಿಗೆ ಪರೀಕ್ಷೆ ನಡೆಸಿದಾಗ ಅಭ್ಯರ್ಥಿಗಳು ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆ ಬಲ್ಲರಾಗಿರಬೇಕು. ಕನ್ನಡದಲ್ಲಿ ಪ್ರಶ್ನೆಗಳು ಅರ್ಥವಾಗದಿದ್ದಾಗ ಆಂಗ್ಲಭಾಷೆಯಲ್ಲಿ ನೋಡಿಕೊಳ್ಳತ್ತಕ್ಕದ್ದು ಎಂದು ಮೊದಲೇ ಅಭ್ಯರ್ಥಿಗಳಿಗೆ ತಿಳಿಸಲಾಗಿತ್ತು. ಆದರೂ ಅಭ್ಯರ್ಥಿಗಳು ಸುಮ್ಮನೆ ಅನುವಾದದಲ್ಲಿ ದೋಷಗಳಾಗಿವೆ ಎಂದು ಕೆಎಟಿ ಮೊರೆ ಹೋಗಿದ್ದಾರೆ. ನಿರ್ದಿಷ್ಟವಾಗಿ ಆರೋಪಗಳನ್ನು ಸಾಬೀತುಪಡಿಸುವ ಅಂಶಗಳನ್ನು ಪ್ರಸ್ತಾಪಿಸಿಲ್ಲ ಎಂದರು.

ಅರ್ಜಿದಾರರ ಆಕ್ಷೇಪವೇನು?
ಅರ್ಜಿದಾರ ಅಭ್ಯರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಆರ್‌. ರಾಜಗೋಪಾಲ್‌ ಮತ್ತು ವಕೀಲ ಪ್ರಥ್ವೀಶ್‌, ಪ್ರಶ್ನೆ ಪತ್ರಿಕೆ ಅನುವಾದ ಕಾರ್ಯದಲ್ಲಿ ಆಗಿರುವ ದೋಷಗಳನ್ನು ನ್ಯಾಯಮಂಡಳಿಗೆ ವಿವರಿಸಿದರಲ್ಲದೆ, ಮೊದಲು ಕೀ ಉತ್ತರಗಳನ್ನು ಪ್ರಕಟಿಸಿ ನಂತರ ಅವುಗಳನ್ನು ತಜ್ಞರ ಸಮಿತಿ ಪರಿಶೀಲಿಸಿದ ಬಳಿಕ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಆದ್ದರಿಂದ, ತಜ್ಞರ ಸಮಿತಿಯ ವರದಿ ಪರಿಶೀಲಿಸುವ ಎಲ್ಲ ಅಧಿಕಾರ ನ್ಯಾಯಮಂಡಳಿಗೆ ಇದೆ ಎಂದು ಪ್ರತಿಪಾದಿಸಿದರು.

ಮೊದಲು ನಡೆಸಿದ್ದ ಪರೀಕ್ಷೆಯಲ್ಲಿ ಆಗಿದ್ದ ಲೋಪಗಳಂತೆ ಮರು ಪರೀಕ್ಷೆಯಲ್ಲೂ ಲೋಪಗಳು ಪುನರಾವರ್ತಿಸಿರುವುದರಿಂದ ಕೆಪಿಎಸ್‌ಸಿ ಪ್ರಕಟಿಸಿರುವ 1:15 ಅರ್ಹತಾ ಪಟ್ಟಿಯನ್ನು ರದ್ದುಗೊಳಿಸಬೇಕು ಹಾಗೂ ಹೊಸದಾಗಿ ಮರುಪರೀಕ್ಷೆ ನಡೆಸಲು ಕೆಪಿಎಸ್‌ಸಿಗೆ ನಿರ್ದೇಶಿಸಬೇಕು ಎಂದು ಕೋರಿದರು.

Related Articles

Comments (0)

Leave a Comment