ಕೆಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಕೆಎಟಿ ಬ್ರೇಕ್; ವೇಳಾಪಟ್ಟಿ ಅಧಿಸೂಚನೆ ಅಮಾನತಿನಲ್ಲಿಡಲು ಆಯೋಗಕ್ಕೆ ಆದೇಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2023-24ನೇ ಸಾಲಿನ ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಲು ಜನವರಿ 29ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಮುಂದಿನ ವಿಚಾರಣೆವರೆಗೆ ಅಮಾನತ್ತಿನಲ್ಲಿಡುವಂತೆ ಕೆಪಿಎಸ್‌ಸಿಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶಿಸಿದೆ.

ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಶ್ನಿಸಿ ಡಿ. ಪವಿತ್ರ ಸೇರಿ 52 ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ಎಸ್‌.ವೈ. ವಟವಟಿ ಮತ್ತು ಆಡಳಿತ ಸದಸ್ಯೆ ಡಾ. ಅಮಿತಾ ಪ್ರಸಾದ್‌ ಅವರಿದ್ದ ಕೆಎಟಿ ಪೀಠ ಈ ಆದೇಶ ಮಾಡಿ, ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಿದೆ.

ಕಳೆದ ಜನವರಿ 30ರಂದು ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟಿಸಿ, ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಆಯೋಗಕ್ಕೆ ಕೆಎಟಿ ಅನುಮತಿ ನೀಡಿತ್ತು. ಇದೀಗ, ಮುಖ್ಯ ಪರೀಕ್ಷೆ ಅಧಿಸೂಚನೆಯನ್ನು ಅಮಾನತಿನಲ್ಲಿಡಲು ಆದೇಶಿಸಿರುವುದರಿಂದ, ನೇಮಕಾತಿ ಪ್ರಕ್ರಿಯೆಗೆ ಮತ್ತೆ ಬ್ರೇಕ್ ಬಿದ್ದಂತಾಗಿದೆ.

ಲೋಪ ಸರಿಪಡಿಸದೆ ಮುಖ್ಯ ಪರೀಕ್ಷೆ ಹೇಗೆ ಸಾಧ್ಯ?
ಅರ್ಜಿ ಕುರಿತು ವಾದ-ಪ್ರತಿವಾದ ಆಲಿಸಿದ ಪೀಠ, ಪ್ರಶ್ನೆ ಪತ್ರಿಕೆಗಳನ್ನು ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವಾಗ ಲೋಪಗಳಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆಯೋಗವೂ ಸಹ ಅದನ್ನು ಒಪ್ಪಿಕೊಂಡು ಆ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು. ವರದಿ ಸಲ್ಲಿಸಿರುವ ಸಮಿತಿ, ಪ್ರಶ್ನೆ ಪತ್ರಿಕೆ ಭಾಷಾಂತರದಲ್ಲಿ ದೋಷಗಳಾಗಿರುವುದನ್ನು ದೃಢಪಡಿಸಿತ್ತಲ್ಲದೆ, ಅವುಗಳನ್ನು ಬಗೆಹರಿಸುವಂತೆ ಸಲಹೆ ನೀಡಿತ್ತು. ಹಿಂದಿನ ದೋಷಗಳನ್ನು ಸರಿಪಡಿಸದೆಯೇ ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಹೇಗೆ ಅಧಿಸೂಚನೆ ಹೊರಡಿಸಿದೆ ಎಂದು ಪ್ರಶ್ನಿಸಿದೆ.

ಸನ್ನಿವೇಶ ಹೀಗಿರುವಾಗ ಮುಖ್ಯ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಹೊರಡಿಸಿರುವ ಅಧಿಸೂಚನೆಯನ್ನು ಅಮಾನತಿನಲ್ಲಿಡುವುದೇ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕೆ‌ಎಟಿ, ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿ ಜನವರಿ 29ರಂದು ಹೊರಡಿಸಿರುವ ಆದೇಶವನ್ನು ಮುಂದಿನ ವಿಚಾರಣೆವರೆಗೆ ಅಮಾನಲ್ಲಿಡುವಂತೆ ಆಯೋಗಕ್ಕೆ ನಿರ್ದೇಶಿಸಿತು.

Related Articles

Comments (0)

Leave a Comment