- ಟ್ರಯಲ್ ಕೋರ್ಟ್
- Like this post: 0
ಕಾಮಾಕ್ಷಿಪಾಳ್ಯ ಠಾಣಾಧಿಕಾರಿಯನ್ನೂ ಆರೋಪಿಯಾಗಿಸಿ ವಿಚಾರಣೆಗೊಳಪಡಿಸಬೇಕು; ಕೋರ್ಟ್‌ಗೆ ಆರೋಪಿ ಪವನ್ ವಕೀಲರ ಮನವಿ
- by Ramya B T
- February 24, 2026
- 5 Views
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿದ ಶಂಕೆಯ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿಸಿ ವಿಚಾರಣೆ ನಡೆಸಬೇಕು ಎಂದು ಪ್ರಕರಣದ 3ನೇ ಆರೋಪಿ ಪವನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಪ್ರಕರಣದ ವಿಚಾರಣೆ ಮುಂದುವರಿಸಿತು. ಆರೋಪಿ ಪವನ್ ಪರ ವಕೀಲ ಸುಧನ್ವ ಹಾಜರಾಗಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಆವರಣ ಪ್ರವೇಶಿಸಲು ಅನುಮತಿ ನೀಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಮೆಮೊ ಸಲ್ಲಿಸಿದರು.
ಜತೆಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, 2024ರ ಜೂನ್ 11ರಂದು ರಾತ್ರಿ 1 ಗಂಟೆಗೆ ಏಳು ಮಂದಿ ಆರೋಪಿಗಳ 8 ಮೊಬೈಲ್‌ಗಳನ್ನು ಮಹಜರು ನಡೆಸಿ ಜಪ್ತಿ ಮಾಡಿದ್ದಾರೆ. ಈ ವೇಳೆ ಮೊಬೈಲ್‌ಗಳನ್ನು ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿ, ಆ ಕುರಿತು ಪೋಟೋ ಸಲ್ಲಿಸಿದ್ದಾರೆ. ಆದರೆ, ಪೋಟೋದಲ್ಲಿ ಕಾಣುವ ಟೈಲ್ಸ್ ಬಿಳಿ ಬಣ್ಣದ ವೆಟ್ರಿಫೈಯ್ಡ್ ಟೈಲ್ಸ್ ಆಗಿರುತ್ತದೆ. ಆ ರೀತಿಯ ಟೈಲ್ಸ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲ. ಆದ್ದರಿಂದ, ಪೊಲೀಸ್ ಠಾಣೆಯಲ್ಲಿ ಮಹಜರು ನಡೆದಿಲ್ಲ. ಈ ಕುರಿತು ಪರಿಶೀಲಿಸಲು ಸೋಮವಾರ ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಗೆ ನಾನು ಭೇಟಿ ನೀಡಿದ್ದೆ. ಠಾಣೆ ಪ್ರವೇಶಿಸಲು ಪೊಲೀಸರು ಅವಕಾಶವೇ ನೀಡಿಲ್ಲ ಎಂದು ದೂರಿದರು.
ಮುಂದುವರಿದು, ಪೊಲೀಸ್ ಠಾಣೆಯು ಸಾರ್ವಜನಿಕ ಪ್ರದೇಶವಾಗಿದ್ದು, ಪ್ರವೇಶ ನಿರಾಕರಿಸುವ ಅಧಿಕಾರ ಪೊಲೀಸರಿಗೆ ಇಲ್ಲ. ಆದ್ದರಿಂದ, ಸುಳ್ಳು ಸಾಕ್ಷ್ಯ ಒದಗಿಸಿರುವ ಕಾರಣಕ್ಕೆ ಪ್ರಕರಣವನ್ನು ಮೊದಲಿಗೆ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯಾಗಿ ಮಾಡಿ ವಿಚಾರಣೆ ನಡೆಸಬೇಕು. ಜತೆಗೆ, ನ್ಯಾಯಾಲಯದ ನ್ಯಾಯಾಧೀಶರೇ ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡಬೇಕು ಎಂದು ಕೋರಿದರು.
ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಸುಧನ್ವ ಅವರು ಸೋಮವಾರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಸಂರಕ್ಷಣೆ ಮಾಡಬೇಕು ಎಂದು ಪೊಲೀಸರಿಗೆ ಸೂಚಿಸಿತು. ಜತೆಗೆ, ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಲು ಪೊಲೀಸರು ಅನುಮತಿ ನಿರಾಕರಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸುಧನ್ವ ಅವರಿಗೆ ನಿರ್ದೇಶಿಸಿದರು.
ಕುಟುಂಬಸ್ಥರ ಭೇಟಿಗೆ ಅನುಮತಿ ಕೋರಿದ ದರ್ಶನ್:
ನಟ ದರ್ಶನ್ ಪರ ವಕೀಲರು, ಜೈಲಿನ ಒಳಗೆ ದರ್ಶನ್ ಭೇಟಿ ಮಾಡಲು ಅವರ ಕುಟುಂಬದ ಸದಸ್ಯರಿಗೆ ಅನುಮತಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಮತ್ತು ಪ್ರಕರಣವನ್ನು ಪ್ರತಿ ದಿನ ವಿಚಾರಣೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಹೇಳಿತು.
ಇನ್ನು ಘಟನೆ ನಡೆದ ಸ್ಥಳಕ್ಕೆ ನ್ಯಾಯಾಧೀಶರೇ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ದೋಷಾರೊಪ ಪಟ್ಟಿಯಲ್ಲಿ ಹೆಸರಿಸದ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಬೇಕು ಎಂದು ಕೋರಿ ದರ್ಶನ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ಸರ್ಕಾರ ಅಭಿಯೋಜಕರಿಗೆ ನಿರ್ದೇಶಿಸಿದ ನ್ಯಾಯಾಲಯ, ಅಂತಿಮವಾಗಿ ಪ್ರಕರಣದ 17 ಮತ್ತು 18ನೇ ಸಾಕ್ಷಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು.
ಆಭರಣ ಹಿಂದಿರುಗಿಸಲು ಸೂಚನೆ:
ರೇಣುಕಾಸ್ವಾಮಿ ಮೃತ ದೇಹದ ಮೇಲಿದ್ದ ಆಭರಣಗಳನ್ನ ಅವರ ಪೋಷಕರಿಗೆ ನೀಡಲು ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ, ಆ ಆಭರಣಗಳನ್ನು ಬದಲಿಸದೆ ಸಂಗ್ರಹಿಸಿಟ್ಟುಕೊಳ್ಳಬೇಕು. ಕೋರ್ಟ್ ಸೂಚಿಸಿದಾಗ ಹಾಜರುಪಡಿಸಬೇಕು ಎಂದು ರೇಣುಕಾಸ್ವಾಮಿ ಪೋಷಕರಿಗೆ ನಿರ್ದೇಶಿಸಿತು.
ಜಡ್ಜ್‌ಗೆ ಧನ್ಯವಾದ ತಿಳಿಸಿದ ದರ್ಶನ್:
ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ದರ್ಶನ್, ಜೈಲಿನಲ್ಲಿ ತಮ್ಮ ಕೊಠಡಿಗೆ ಟಿವಿ ಅಳವಡಿಸಲು ಆದೇಶಿಸಿದಕ್ಕೆ ನ್ಯಾಯಾಧೀಶರಿಗೆ ಧನ್ಯವಾದ ಹೇಳಿದರು. ಜತೆಗೆ, ವಿಚಾರಣೆಗೆ ವಿಸಿ ಬದಲು ಖುದ್ದು ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಆಗ ನಮಗೆ ಒಂದು ಹೊತ್ತು ಮನೆ ಊಟ ಸಿಗುತ್ತದೆ ಎಂದು ನ್ಯಾಯಾಧೀಶರನ್ನು ಕೋರಿದರು.
Related Articles
Thank you for your comment. It is awaiting moderation.


Comments (0)