ಬೇರೆ ಜೈಲಿಗೆ ದರ್ಶನ್ ಸ್ಥಳಾಂತರಕ್ಕೆ ಅಧಿಕಾರಿಗಳ ಮನವಿ, ಹಾಸಿಗೆ-ಹೊದಿಕೆಗೆ ಕೋರಿ ದರ್ಶನ್ ಅರ್ಜಿ; ಸೆ.2ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತವರ ಸಹಚರರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ರಾಜ್ಯದ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವಂತೆ ಜೈಲು ಅಧಿಕಾರಿಗಳು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಜೈಲಿನಲ್ಲಿ ಹಾಸಿಗೆ-ತಲೆದಿಂಬು, ಹೊದಿಕೆಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ನಟ ದರ್ಶನ್ ಸಹ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಹಾಗೂ ಇತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ಸ್ಥಳಾಂತರಿಸಬೇಕೆಂದು ಕೋರಿ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯನ್ನು ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರು ವಿಚಾರಣೆ ನಡೆಸಿದರು.

ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಮೂಲಕ ಜೈಲು ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ ದರ್ಶನ್ ಪರ ವಕೀಲ ಸುನೀಲ್ ಕುಮಾರ್, ಸದ್ಯದಲ್ಲೇ ಕೊಲೆ ಪ್ರಕರಣದ ವಿಚಾರಣೆ ಪ್ರಾರಂಭವಾಗಲಿದೆ. ಈ ಹಂತದಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದರೆ ವಕೀಲರ ಭೇಟಿಗೆ ಹಾಗೂ ವಿಚಾರಣೆಗೆ ಹಾಜರಾಗಲು ಕಷ್ಟವಾಗುತ್ತದೆ. ದರ್ಶನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಬಳ್ಳಾರಿಗೆ ಹೋಗಿ ಮಗನನ್ನು ನೋಡಲು ಕಷ್ಟವಾಗುತ್ತದೆ ಎಂದರು.

ಹಾಸಿಗೆ, ದಿಂಬು, ಹೊದಿಕೆಗೆ ದರ್ಶನ್ ಮನವಿ:
ಇನ್ನು ಜೈಲಿನಲ್ಲಿ ದರ್ಶನ್ ಅವರಿಗೆ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ವಿಚಾರಣಾಧೀನ ಕೈದಿಗೆ ಏನೆಲ್ಲ ಸೌಲಭ್ಯ ಕಲ್ಪಿಸಬೇಕೆಂದು ಜೈಲು ಕೈಪಿಡಿಯಲ್ಲಿದೆ. ಬಟ್ಟೆ, ಹಾಸಿಗೆಗಳನ್ನು ತಮ್ಮ ಖರ್ಚಿನಲ್ಲಿ ಪಡೆದುಕೊಳ್ಳಲು ಅವಕಾಶವಿದೆ. ದರ್ಶ‌ನ್ ಅವರಿಗೆ ಬಟ್ಟೆ, ಹಾಸಿಗೆ, ದಿಂಬು ಹಾಗೂ ಹೊದಿಕೆಗಳನ್ನು ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಕೋರ್ಟ್‌ನಿಂದ ಯಾವುದೇ ಆದೇಶವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ವಕೀಲ ಸುನೀಲ್ ಕುಮಾರ್ ಆರೋಪಿಸಿದರು.

ವಾದ ಆಲಿಸಿದ ನ್ಯಾಯಾಧೀಶರು, ದರ್ಶನ್ ಅವರಿಗೆ ಜೈಲು ಕೈಪಿಡಿಯ ಪ್ರಕಾರ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಪ್ರತಿಕ್ರಿಯಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿ, ಎರಡೂ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿದರು.

ಪವಿತ್ರಾ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್:
ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶನಿವಾರ ಪೂರ್ಣಗೊಳಿಸಿದ ನ್ಯಾಯಾಲಯ, ಸೆಪ್ಟೆಂಬರ್ 2ಕ್ಕೆ ಆದೇಶ ಕಾಯ್ದಿರಿಸಿದೆ.

ವಿಚಾರಣೆ ವೇಳೆ ಪವಿತ್ರಾ ಗೌಡ ಪರ ವಾದ ಮಂಡಿಸಿದ ವಕೀಲ ಬಾಲನ್, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿ‌ಎನ್‌ಎಸ್‌ಎಸ್) ಜಾರಿಯಾದ ನಂತರ ಘಟನೆ ನಡೆದಿದೆ. ಆದ್ದರಿಂದ, ಬಿಎನ್‌ಎಸ್‌ಎಸ್ ಅಡಿಯಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, ತನಿಖಾಧಿಕಾರಿಗಳು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಬಿಎನ್ಎಸ್ಎಸ್ ಅಡಿಯಲ್ಲಿ ತನಿಖೆ ನಡೆಯಬೇಕು. ಪ್ರಕರಣದಲ್ಲಿ ಆರೋಪಪಟ್ಟಿ ಹಾಗೂ ನ್ಯಾಯಾಲಯದ ಕಾಗ್ನೈಜೆನ್ಸ್ ಎರಡೂ ಕಾನೂನು ಬದ್ದವಾಗಿರದ ಕಾರಣ ಪವಿತ್ರಾ ಗೌಡ ಜಾಮೀನಿಗೆ ಅರ್ಹರಾಗಿದ್ದಾರೆ. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಪ್ರಶ್ನಿಸುತ್ತಿಲ್ಲ. ತಾಂತ್ರಿಕ ಲೋಪವಿರುವ ಕಾರಣ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.

ಈ ವಾದವನ್ನು ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ಅವರು, 2024ರ ಜುಲೈ 1ರಿಂದ ಬಿಎನ್ಎಸ್‌ಎಸ್ ಜಾರಿಗೆ ಬಂದಿದೆ. ಆದರೆ, ಅದಕ್ಕೂ ಮೊದಲೇ 2024ರ ಜೂನ್ 6ರಂದು ಎಫ್‌ಐಆರ್ ದಾಖಲಾಗಿದೆ. ಆದ್ದರಿಂದ, ಬಿಎನ್‌ಎಸ್‌ಎಸ್ ಸೆಕ್ಷನ್ 531ರ ಪ್ರಕಾರ ಸಿಆರ್‌ಪಿಸಿ ಅನುಸಾರವೇ ತನಿಖೆ ಮುಂದುವರಿಸಿ, ದೋಷಾರೋಪ ಪಟ್ಟಿ ಸಲ್ಲಿಸಬೇಕು. ಪ್ರಕರಣದಲ್ಲಿ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಈ ಹಂತದಲ್ಲಿ ಜಾಮೀನು ಅರ್ಜಿ ಸಲ್ಲಿಸಿರುವುದು ತಪ್ಪು ಗ್ರಹಿಕೆಯಿಂದ ಕೂಡಿದೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕೆಂದು ಮನವಿ ಮಾಡಿದರು.

Related Articles

Comments (0)

Leave a Comment