- ಟ್ರಯಲ್ ಕೋರ್ಟ್
- Like this post: 19
ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಸೇರಿ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು
- by Jagan Ramesh
- January 28, 2025
- 167 Views

ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಐಐಎಸ್ಸಿ ಮಾಜಿ ನಿರ್ದೇಶಕ ಪಿ. ಬಲರಾಮ್ ಸೇರಿ 18 ಮಂದಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲು ಬೆಂಗಳೂರಿನ ವಿಶೇಷ ಸೆಷನ್ಸ್ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದ ಬೆನ್ನಲ್ಲೇ, ಸದಾಶಿವನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಐಐಸಿಎಸ್ಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಭೋವಿ ಸಮುದಾಯದ ಡಾ. ಡಿ. ಸಣ್ಣ ದುರ್ಗಪ್ಪ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ಬೆಂಗಳೂರಿನ 71ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಹಾಗೂ ವಿಶೇಷ ನ್ಯಾಯಾಧೀಶರಾದ ಕೆ. ರಾಜೇಶ್ ಕರ್ಣಂ ಅವರು ಜನವರಿ 17ರಂದು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿ, ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದ್ದರು.
ವಿಶೇಷ ನ್ಯಾಯಾಲಯದ ಆದೇಶದ ಅನುಸಾರ ಜನವರಿ 27ರಂದು ಸದಾಶಿವನಗರ ಪೊಲೀಸರು ಗೋವಿಂದನ್ ರಂಗರಾಜನ್, ಶ್ರೀಧರ್ ವಾರಿಯರ್, ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಅನಿಲ್ ಕುಮಾರ್, ದೀಪ್ಸಿಕಾ ಚಕ್ರವರ್ತಿ, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಸಂಧ್ಯಾ ವಿಶ್ವೇಶ್ವರಯ್ಯ, ಕೆ.ವಿ.ಎಸ್. ಹರಿ, ಪಿ. ಬಾಲಚಂದ್ರ, ದಾಸಪ್ಪ, ಪಿ. ಬಲರಾಮ, ಅಂಜಲಿ ಕೆ. ಕಾರಂಡೆ, ಹೇಮಲತಾ ಮ್ಹಿಷಿ, ಕೆ. ಚಟ್ಟೋಪಾಧ್ಯಾಯ, ಪ್ರದೀಪ್ ಸಾವ್ಕಾರ್, ಅಭಿಲಾಷ್ ರಾಜು, ವಿಕ್ಟರ್ ಮನೋಹರನ್ ಅವರನ್ನು ಕ್ರಮವಾಗಿ 18 ಆರೋಪಿಗಳನ್ನಾಗಿಸಿ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಸೆಕ್ಷನ್ 3(8), 3(14), 3(1)(2), 3(x) ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಖಾಸಗಿ ದೂರಿನಲ್ಲೇನಿದೆ?
ಐಐಎಸ್ಸಿಯಲ್ಲಿ 2014ರಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ಆರೋಪಿಗಳು ನನ್ನನ್ನು ಸೇವೆಯಿಂದ ವಜಾ ಮಾಡಿಸಿದ್ದಾರೆ. ಅಲ್ಲದೆ, 2008ರಿಂದ 2025ರವರೆಗೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ್ದಾರೆ. ಐಐಎಸ್ಸಿಯಲ್ಲಿರುವ ಲೈಂಗಿಕ ಕಿರುಕುಳ ನಿಷೇಧ ಸಮಿತಿಯಲ್ಲಿ ಒಬ್ಬೇ ಒಬ್ಬರು ಎನ್ಜಿಒ ಸದಸ್ಯರಿಲ್ಲ. ಈ ಸಮಿತಿಗೆ ಕೆಲಸದಿಂದ ವಜಾ ಮಾಡುವ ಅಧಿಕಾರವಿಲ್ಲ ಎಂದು ಕರ್ನಾಟಕ ಶಾಸನ ಸಭೆ ತನಿಖೆಯಲ್ಲಿ ಹೇಳಲಾಗಿದೆ. ತನಿಖೆಯ ಸಂದರ್ಭದಲ್ಲಿ ನನ್ನನ್ನು ಮರು ನೇಮಕ ಮಾಡಲಾಗುವುದು ಎಂದು ನಿರ್ದೇಶಕರು ಒಪ್ಪಿಕೊಂಡಿದ್ದರಾದರೂ, ಈವರೆಗೂ ಮರು ನೇಮಕವಾಗಿಲ್ಲ. ನನ್ನ ಹೆಸರಿಗೆ ಕಳಂಕ ಹಚ್ಚಿದ್ದು, ದೇಶದ ಬೇರೆಲ್ಲಿಯೂ ಕೆಲಸ ಸಿಗದಂತೆ ಮಾಡಲಾಗಿದೆ ಎಂದು ಡಾ. ಸಣ್ಣ ದುರ್ಗಪ್ಪ ಖಾಸಗಿ ದೂರಿನಲ್ಲಿ ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಲು ಮುಂದಾದಾಗ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಲಾಗಿದೆ. ಜತೆಗೆ, ಐಐಎಸ್ಸಿಯಲ್ಲಿ ಇದುವರೆಗೆ 30 ಲೈಂಗಿಕ ಕಿರುಕುಳ ದೂರು ದಾಖಲಾಗಿದ್ದು, ಇದುವರೆಗೆ ಯಾರನ್ನೂ ಸೇವೆಯಿಂದ ವಜಾಗೊಳಿಸಲಾಗಿಲ್ಲ. ಐಐಎಸ್ಸಿಯಲ್ಲಿ ಎಸ್ಸಿಪಿ-ಟಿಎಸ್ಪಿಯ ಸುಮಾರು 2,500 ಕೋಟಿ ಅನುದಾನವನ್ನು ಲೂಟಿ ಮಾಡಲಾಗಿದೆ. ಐಐಎಸ್ಸಿ ನಿರ್ದೇಶಕರು 15 ಬಾರಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ನನಗೆ ಬೆದರಿಕೆ ಹಾಕುವುದಲ್ಲದೇ, ನ್ಯಾಯಮೂರ್ತಿಗಳನ್ನು ಬುಕ್ ಮಾಡಿಕೊಂಡು ಪ್ರಕರಣ ಗೆಲ್ಲುವುದಾಗಿ ಹೇಳಿದ್ದಾರೆ ಎಂದು ಖಾಸಗಿ ದೂರುದಾರ ಡಾ. ಸಣ್ಣ ದುರ್ಗಪ್ಪ ವಿವರಿಸಿದ್ದಾರೆ.
Related Articles
Thank you for your comment. It is awaiting moderation.
Comments (0)