ಅಕ್ರಮ ಹಣ ವರ್ಗಾವಣೆ ಆರೋಪ; ಐಶ್ವರ್ಯಾ ಗೌಡಗೆ ಜಾಮೀನು ನೀಡಿದ ಇಡಿ ವಿಶೇಷ ಕೋರ್ಟ್

ಬೆಂಗಳೂರು: ಹಣ‌ ಅಕ್ರಮ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದಿಂದ (ಇಡಿ) ಒಳಾಗಿರುವ ಐಶ್ವರ್ಯಾ ಗೌಡಗೆ ಇಡಿ ವಿಶೇಷ ನ್ಯಾಯಾಲಯ (ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್‌ ಕೋರ್ಟ್‌) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಐಶ್ವರ್ಯಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಇಡಿ ವಿಶೇಷ ನ್ಯಾಯಾಲಯ ಈ ಆದೇಶ ಮಾಡಿದೆ.

ಆರೋಪಿ ಐಶ್ವರ್ಯಾ ಗೌಡ 5 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್‌ ಒದಗಿಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರ ಶ್ಯೂರಿಟಿ ನೀಡಬೇಕು. ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಬೆಂಗಳೂರು ನಗರ ವ್ಯಾಪ್ತಿ ಬಿಟ್ಟು ತೆರಳಬಾರದು. ವಿಳಾಸ ಬದಲಾವಣೆ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಕರಣವೇನು?
ಉಪ‌ ಮುಖ್ಯಮಂತ್ರಿ ಡಿ.ಕೆ.‌ ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.‌ ಸುರೇಶ್ ಅವರ ಸಹೋದರಿ ಎಂದು‌ ಹೇಳಿಕೊಂಡು ಹಲವರಿಗೆ ಹಣ ಹಾಗೂ ಚಿನ್ನಾಭರಣ ವಂಚಿಸಿದ ಆರೋಪ ಸಂಬಂಧ ಐಶ್ವರ್ಯಾ ಗೌಡ ವಿರುದ್ಧ ವಿವಿಧ ಪೊಲೀಸ್ ಠಾಣೆ‌ಗಳಲ್ಲಿ ಎಫ್ಐಆರ್ ದಾಖಲಾಗಿವೆ. ಆ ನಂತರ ಪೊಲೀಸರು ಇಡಿಗೆ ವರದಿ ಸಲ್ಲಿಸಿ ಐಶ್ವರ್ಯಾ ಗೌಡ ಯಾವುದೇ ತೆರಿಗೆ ಪಾವತಿಸದೆ, ಲೆಕ್ಕಪತ್ರಗಳನ್ನು ನಿರ್ವಹಣೆ ಮಾಡದೆ ಕೋಟ್ಯಂತರ ರೂ. ವ್ಯವಹಾರ ನಡೆಸಿದ್ದಾರೆ ಎಂದು ತಿಳಿಸಿದ್ದರು.

ಆ ವರದಿ ಮತ್ತು ಪೊಲೀಸರ ಎಫ್‌ಐಆರ್‌ ಆಧರಿಸಿ ಇಡಿ ಅಧಿಕಾರಿಗಳು, ಅಕ್ರಮ ವಹಿವಾಟು ಮತ್ತು ವರ್ಗಾವಣೆ ನಡೆಸಿದ ಆರೋಪದಲ್ಲಿ ಐಶ್ವರ್ಯಾ ಗೌಡ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ನಂತರ ಐಶ್ವರ್ಯಾ ಗೌಡ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಪೊಲೀಸ್‌ ಕಸ್ಟಡಿಯ ಅವಧಿ ಮುಗಿದ ಬಳಿಕ ವಿಶೇಷ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನದಕ್ಕೆ ವಹಿಸಿತ್ತು.

 

Related Articles

Comments (0)

Leave a Comment