- ಟ್ರಯಲ್ ಕೋರ್ಟ್
- Like this post: 0
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ; ತಪ್ಪೊಪ್ಪಿಕೊಂಡ ಮೂವರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ ಎನ್‌ಐಎ ಕೋರ್ಟ್
- by Prashanth Basavapatna
- July 23, 2025
- 18 Views

ಬೆಂಗಳೂರು: ಪ್ರವಾದಿ ಮೊಹಮ್ಮದ್ ಕುರಿತು ನಿಂದನಾತ್ಮಕ ಪೋಸ್ಟ್ ಹಾಕಲಾಗಿದೆ ಎಂಬ ಕಾರಣಕ್ಕೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಗಲಭೆ ಪ್ರಕರಣದಲ್ಲಿ ಆರೋಪ ನಿಗದಿಪಡಿಸುವಾಗ ಮೂವರು ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿರುವುದರಿಂದ ಅವರಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಹಾಗೂ ತಲಾ 36 ಸಾವಿರ ರೂ. ದಂಡ ವಿಧಿಸಿ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಸೈಯ್ಯದ್ ಇಕ್ರಾಮುದ್ದೀನ್ ಅಲಿಯಾಸ್ ಸೈಯದ್ ನವೀದ್, ಸೈಯದ್ ಆತೀಫ್ ಮತ್ತು ಮೊಹಮ್ಮದ್ ಆತೀಫ್ ಅವರು ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆಂಪರಾಜು ಇತ್ತೀಚೆಗೆ ಆದೇಶಿಸಿದ್ದಾರೆ.
ಐಪಿಸಿಯ ವಿವಿಧ ಸೆಕ್ಷನ್‌ಗಳು, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ, ಕಾನೂನುಬಾಹಿರ ಚಟುವಟಿಕೆ ನಿಷೇಧ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ವಿಧಿಸಿರುವ ನ್ಯಾಯಾಲಯ, ಅಪರಾಧಿಗಳು ಈಗಾಗಲೇ ಅನುಭವಿಸಿರುವ ಶಿಕ್ಷೆಯನ್ನು ಕಳೆದು ಬಾಕಿ ಶಿಕ್ಷೆಯು ಏಕಕಾಲಕ್ಕೆ ಚಾಲ್ತಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಒಟ್ಟು 199 ಆರೋಪಿಗಳಿದ್ದು, 187 ಮಂದಿಯನ್ನು ಬಂಧಿಸಲಾಗಿತ್ತು. 4 ಮಂದಿ ತಾವೇ ಶರಣಾಗಿದ್ದು, ಒಬ್ಬರು ಮೃತಪಟ್ಟಿದ್ದರು. ಸೈಯ್ಯದ್ ಇಕ್ರಾಮುದ್ದೀನ್, ಸೈಯದ್ ಆತೀಫ್ ಮತ್ತು ಮೊಹಮ್ಮದ್ ಆತೀಫ್ ಅವರು ಕ್ರಮವಾಗಿ 14, 16 ಮತ್ತು 18ನೇ ಆರೋಪಿಗಳಾಗಿದ್ದಾರೆ. 138 ಮಂದಿಯ ವಿರುದ್ಧ ಪ್ರಾಸಿಕ್ಯೂಷನ್ ಆರೋಪ ಪಟ್ಟಿ ಸಲ್ಲಿಸಿದೆ.
ಪ್ರಕರಣವೇನು?
ಫೇಸ್‌ಬುಕ್‌ನಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪಿ. ನವೀನ್ ಎಂಬಾತನನ್ನು ಬಂಧಿಸುವಂತೆ ಒತ್ತಾಯಿಸಿ ಒಂದು ಕೋಮಿಗೆ ಸೇರಿದ ಕೆಲವರು 2020ರ ಆಗಸ್ಟ್ 11ರ ರಾತ್ರಿ ಕೆಜಿ ಹಳ್ಳಿ ಪೊಲೀಸ್ ಠಾಣೆಯ ಎದುರು ಸೇರಿ, ನವೀನ್ ಬಂಧನಕ್ಕೆ ಆಗ್ರಹಿಸಿದ್ದರು. ಪ್ರತಿಭಟನೆಯ ನೇತೃತ್ವವನ್ನು ಸೈಯದ್ ಇಕ್ರಾಮುದ್ದೀನ್ ವಹಿಸಿದ್ದನು.
ಪ್ರಕರಣ ದಾಖಲಿಸಿ, ತಪ್ಪಿತಸ್ಥನನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಹಠ ಹಿಡಿದಿದ್ದರಿಂದ, ಪರಿಸ್ಥಿತಿ ಕೈಮೀರುವುದನ್ನು ಹದ್ದುಬಸ್ತಿಗೆ ತರಲು ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಇದರಿಂದ, ಕುಪಿತಗೊಂಡ ಗುಂಪು ಹಲ್ಲೆ ನಡೆಸಿ, ದೊಂಬಿ ಎಬ್ಬಿಸಿತ್ತು. ಘಟನೆಯಲ್ಲಿ 12 ವಾಹನಗಳು ಮತ್ತು ಒಂದು ಖಾಸಗಿ ವಾಹನಕ್ಕೆ ಹಾನಿಯಾಗಿದ್ದು, ಈ ಪೈಕಿ ಒಂದು ಇನ್ನೋವಾ ಕಾರು, ಐದು ದ್ವಿಚಕ್ರ ವಾಹನ ಹೊತ್ತಿ ಉರಿದಿದ್ದು, ಉಳಿದ ಆರು ಇತರ ವಾಹನಗಳು ಹಾನಿಯಾಗಿತ್ತು.
Related Articles
Thank you for your comment. It is awaiting moderation.
Comments (0)