ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್‌ಗೆ ಹಾಜರಾದ ದರ್ಶನ್, ಪವಿತ್ರಾ ಗೌಡ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಪವಿತ್ರಾ ಗೌಡ, ನಟ ದರ್ಶನ್ ಮತ್ತಿತರರು ಮಂಗಳವಾರ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಬೆಂಗಳೂರಿನ 64ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಐ.ಪಿ. ನಾಯ್ಕ್ ಅವರ ಮುಂದೆ ಮೊದಲ ಆರೋಪಿ ಪವಿತ್ರಾ ಗೌಡ, ಎರಡನೇ ಆರೋಪಿ ದರ್ಶನ್ ಸೇರಿ 14 ಆರೋಪಿಗಳು ಹಾಜರಾಗಿದ್ದರೆ, ಇತರ ಮೂವರು ಆರೋಪಿಗಳಾದ ಕಾರ್ತಿಕ್‌, ಕೇಶವ್ ಹಾಗೂ ನಿಖಿಲ್ ಗೈರಾಗಿದ್ದರು.

ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯ, ಅರ್ಜಿಯ ಮುಂದಿನ ವಿಚಾರಣೆ ವೇಳೆ ಆರೋಪ ನಿಗದಿಪಡಿಸುವುದಾಗಿ (Charge Framing) ತಿಳಿಸಿತು.

ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ಕುಮಾರ್, ಪ್ರಕರಣದಲ್ಲಿ ಕೆಲವರು ಆರೋಪದಿಂದ ಮುಕ್ತಗೊಳಿಸಲು ಕೋರಿ (Discharge) ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದ್ದರಿಂದ, ಈಗಿರುವ ಹಂತದಲ್ಲೇ (ಆರೋಪ ನಿಗದಿಗೂ ಮುನ್ನ ವಿಚಾರಣೆ – Hear before Charge) ಪ್ರಕರಣ ಮುಂದುವರಿಯಲಿ. ಆರೋಪ ನಿಗದಿಪಡಿಸುವ ಹಂತಕ್ಕೆ ಹೋಗಬಾರದೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಮನವಿ ಪರಿಗಣಿಸಿದ‌ ನ್ಯಾಯಾಲಯ, ಆರೋಪ‌ ನಿಗದಿಗೆ ದಿನಾಂಕ ಗೊತ್ತುಪಡಿಸದೆ, ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತು.

ಇನ್ನು ಸುಪ್ರೀಂಕೋರ್ಟ್‌ನಲ್ಲಿ ಆರೋಪಿಗಳ ಜಾಮೀನು ಕುರಿತ ತೀರ್ಪು ನೋಡಿಕೊಂಡು ಮುಂದಿನ ಹೆಜ್ಜೆ ಇಡಲು ಯೋಚಿಸಿರುವ ದರ್ಶನ್ ಪರ ವಕೀಲರು, ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಡಿಸ್ಚಾರ್ಜ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

Related Articles

Comments (0)

Leave a Comment