ದರ್ಶನ್ ಆ್ಯಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ; ರೇಣುಕಾಸ್ವಾಮಿ ಕೊಲೆ ಪ್ರಕರಣ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28ರವರಗೆ ವಿಸ್ತರಿಸಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶಿಸಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹಾಗೂ ತುಮಕೂರು ಜೈಲಿನಲ್ಲಿರುವ 17 ಮಂದಿ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರು ಪಡಿಸಲಾಯಿತು.

ಸರ್ಕಾರದ ಪರ ವಕೀಲರು ಹಾಜರಾಗಿ, ತನಿಖೆಯಲ್ಲಿ ದೊರೆತಿರುವ ತಾಂತ್ರಿಕ ಸಾಕ್ಷ್ಯಗಳಿಂದ ಆರೋಪಿಗಳ ಕೃತ್ಯ ದೃಢಪಟ್ಟಿದೆ. ವೈಜ್ಞಾನಿಕ ಸಾಕ್ಷ್ಯಗಳಿಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎಫ್‌ಎಸ್‌ಎಲ್) ವರದಿ ಬರಬೇಕಿದೆ. ಕೃತ್ಯದಲ್ಲಿ ಇನ್ನೂ ಅನೇಕರ ವಿಚಾರಣೆ ಬಾಕಿ ಇದ್ದು, ಸಾಕ್ಷಿಗಳ ಪ್ರಮಾಣಿಕೃತ ಹೇಳಿಕೆ ದಾಖಲಿಸಿಕೊಳ್ಳುವ ಪ್ರಕ್ರಿಯೆ ಬಾಕಿಯಿದೆ. ಹಣಬಲ ಹಾಗೂ ಪ್ರಭಾವ ಹೊಂದಿರುವ ಆರೋಪಿಗಳಿಗೆ ಜಾಮೀನು ನೀಡಿದರೆ ಮೃತನ ಕುಟುಂಬಕ್ಕೆ ಆಮಿಷ ಅಥವಾ ಬೆದರಿಕೆಯೊಡ್ಡುವ ಹಾಗೂ ಸಾಕ್ಷ್ಯಧಾರ ನಾಶಪಡಿಸುವ ಸಾಧ್ಯತೆಯಿದೆ. ಆದ್ದರಿಂದ, ಎಲ್ಲ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಬೇಕು ಎಂದು ಕೋರಿದರು.

ಈ ಮನವಿ ಪುರಸ್ಕರಿಸಿದ ನ್ಯಾಯಾಧೀಶ ವಿಶ್ವನಾಥ್ ಸಿ.ಗೌಡರ್ ಅವರು, ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆ.28ರವರೆಗೆ ವಿಸ್ತರಿಸಿ, ವಿಚಾರಣೆ ಮುಂದೂಡಿದರು.

ಪ್ರಕರಣವೇನು?
ಪವಿತ್ರಾಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಸ್ವಾಮಿಯನ್ನು ರಾಘವೇಂದ್ರ ಹಾಗೂ ಇತರರ ಮೂಲಕ ಬೆಂಗಳೂರಿಗೆ ಕರೆಸಿಕೊಂಡ ದರ್ಶನ್, ಪವಿತ್ರಾಗೌಡ ಮತ್ತಿತರರು ಜೂ.9ರಂದು ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಮಾರಕಾಸ್ತ್ರಗಳು ಹಾಗೂ ಇತರ ವಸ್ತುಗಳಿಂದ ಹಲ್ಲೆ ನಡೆಸಿ, ಭೀಕರವಾಗಿ ಹತ್ಯೆಗೈದಿದ್ದರು.

ಶವವನ್ನು ಸುಮ್ಮನಹಳ್ಳಿ ರಾಜಕಾಲುವೆಯಲ್ಲಿ ರೇಣುಕಸ್ವಾಮಿ ಮೃತ ಎಸೆದಿದ್ದರು. ರೇಣುಕಸ್ವಾಮಿ ಮೃತದೇಹ ಪತ್ತೆಯಾಗುತ್ತಿದ್ದಂತೆ ರಾಘವೇಂದ್ರ ಸೇರಿ ನಾಲ್ವರು ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡಿದ್ದರು. ಆದರೆ, ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ದರ್ಶನ್ ಹಾಗೂ ಇತರರ ಹೆಸರು ಬಹಿರಂಗಗೊಂಡಿತ್ತು. ಪೊಲೀಸರು ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Related Articles

Comments (0)

Leave a Comment