- ಟ್ರಯಲ್ ಕೋರ್ಟ್
- Like this post: 3
ಜೈಲಿನಲ್ಲಿ ಸೌಲಭ್ಯಕ್ಕೆ ನಟ ದರ್ಶನ್ ಮನವಿ; ಶನಿವಾರಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
- by Ramya B T
- September 19, 2025
- 43 Views

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾದ ನಟ ದರ್ಶನ್ ತಮಗೆ ಹಾಸಿಗೆ, ತಲೆದಿಂಬು ಇನ್ನಿತರ ಸೌಲಭ್ಯ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿರುವ ಅರ್ಜಿ ವಿಚಾರಣೆಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರಕ್ಕೆ ಮುಂದೂಡಿದೆ.
ಕಾರಾಗೃಹದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ದರ್ಶನ್ ಹಾಗೂ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಪ್ರಕರಣದ 13ನೇ ಆರೋಪಿ ದೀಪಕ್ ಹಾಗೂ 14ನೇ ಆರೋಪಿ ಪ್ರದೂಷ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಾಧೀಶ ಐ.ಪಿ. ನಾಯ್ಕ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.
ಈ ವೇಳೆ ನ್ಯಾಯಾಧೀಶರು, ದರ್ಶನ್ ಮನವಿ ಕುರಿತು ಏನಾದರೂ ವಾದ ಮಂಡಿಸುತ್ತೀರಾ? ಎಂದು ತನಿಖಾಧಿಕಾರಿಗಳ ಪರ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕಮಾರ್ ಅವರನ್ನು ಕೇಳಿದರು. ಅದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್ ಅವರು, ಈ ವಿಚಾರವಾಗಿ ಶನಿವಾರ ವಾದ ಮಂಡಿಸುವುದಾಗಿ ತಿಳಿಸಿದರು. ಇದರಿಂದ, ನ್ಯಾಯಾಧೀಶರು ದರ್ಶನ್ ಅರ್ಜಿಯನ್ನು ಶನಿವಾರಕ್ಕೆ ಮುಂದೂಡಿದರು.
ಕೊಲೆಯಲ್ಲಿ ದೀಪಕ್, ಪ್ರದೂಷ್ ಪಾತ್ರಕ್ಕೆ ಪುರಾವೆ:
ಆರೋಪ ಕೈಬಿಡುವಂತೆ ಕೋರಿ ದೀಪಕ್ ಹಾಗೂ ಪ್ರದೂಷ್ ಸಲ್ಲಿಸಿರುವ ಅರ್ಜಿ ಕುರಿತು ವಾದ ಮಂಡಿಸಿದ ಪ್ರಸನ್ನ ಕುಮಾರ್, ರೇಣುಕಾಸ್ವಾಮಿ ಮೇಲೆ ದೀಪಕ್ ಕೂಡ ಹಲ್ಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ದೀಪಕ್ ಬಟ್ಟೆಯಲ್ಲಿಯೂ ರೇಣುಕಾಸ್ವಾಮಿಯ ರಕ್ತದ ಕಲೆ ಪತ್ತೆಯಾಗಿದ್ದವು. ಆತನ ಚಪ್ಪಲಿಗಳು ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದವು. ಇತರ ಆರೋಪಿಗಳ ಸಂಪರ್ಕದಲ್ಲಿ ದೀಪಕ್ ಇರುವುದು ಮೊಬೈಲ್ ಕರೆಗಳ ದಾಖಲೆಗಳಿಂದ (ಸಿಡಿಆರ್) ದೃಢಪಟ್ಟಿದೆ. ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳನ್ನು ಓದುತ್ತಾ, ಆತನ ಮೇಲೆ ಹಲ್ಲೆ ನಡೆಸಲು ಇತರ ಆರೋಪಿಗಳಿಗೆ ಪ್ರದೂಷ್ ಪ್ರಚೋದನೆ ನೀಡಿದ್ದಾನೆ. ಆತನ ಪ್ಯಾಂಟ್ ಹಾಗೂ ಶರ್ಟ್ ಮೇಲೆಯೂ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿವೆ. ಆರೋಪಿ ಪ್ರದೂಷ್ ಕೊಲೆಯಲ್ಲಿ ಭಾಗಿಯಾಗಿರವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಕೋರ್ಟ್‌ಗೆ ವಿವರಿಸಿದರು.
ವಿಸಿ ಮೂಲಕ ಹಾಜರಾದ ಆರೋಪಿಗಳು:
ಬೆಳಗಿನ ಕಲಾಪದ ವೇಳೆ ದರ್ಶನ್, ಪವಿತ್ರಾ ಗೌಡ ಸೇರಿ ಜೈಲಿನಲ್ಲಿರುವ 7 ಆರೋಪಿಗಳು ವಿಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ನ್ಯಾಯಾಧೀಶರ ಮುಂದೆ ತಮ್ಮ ಹಾಜರಾತಿ ದಾಖಲಿಸಿದರು. ಈ ವೇಳೆ ವಿಸಿ ಡಿವೈಸ್‌ನ ಮೈಕ್ ಅನ್ನು (ಆಡಿಯೋ) ಜೈಲು ಸಿಬ್ಬಂದಿ ಆಫ್ ಮಾಡಿದ್ದರು.
ಕಳೆದ ವಿಚಾರಣೆ ವೇಳೆ ವಿಸಿ ಮೂಲಕ ಹಾಜರಾಗಿದ್ದ ದರ್ಶನ್, ತಮ್ಮ ಕೈಗೆ ಫಂಗಸ್ ಆಗಿದೆ. ಕೈ ಮುಚ್ಚಲು ಬೆಚ್ಚಗಿನ ವಸ್ತುಗಳನ್ನು ಕೋರಿದರೂ ಅಧಿಕಾರಿಗಳು ಪೂರೈಸುತ್ತಿಲ್ಲ. ಇತರ ಆರೋಪಿಗಳೊಂದಿಗೆ ಸಮಾಲೋಚಿಸಲೂ ಬಿಡುತ್ತಿಲ್ಲ. ಕೊಠಡಿಯಿಂದ ಹೊರಗೆ ಬಿಡುತ್ತಿಲ್ಲ. ಜೈಲಿನಲ್ಲಿ ಬಹಳ ತೊಂದರೆ ಉಂಟಾಗಿದ್ದು, ತಮಗೆ ವಿಷ ನೀಡಲು ನಿರ್ದೇಶಿಸುವಂತೆ ನ್ಯಾಯಾಧೀಶರನ್ನು ಕೋರಿದ್ದರು. ಆದರೆ, ಶುಕ್ರವಾರ ಮಾತ್ರ ದರ್ಶನ್, ನ್ಯಾಯಾಧೀಶರ ಮುಂದೆ ಏನೂ ಹೇಳದೆ ಮೌನವಾಗಿ ನಿಂತಿದ್ದರು.
ಜೈಲಿನಲ್ಲಿರುವ ಆರೋಪಿಗಳು ಹಾಗೂ ಜಾಮೀನಿನ ಮೇಲೆ ಬಿಡುಗಡೆಗೊಂಡು, ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಆರೋಪಿಗಳ ಹಾಜರಾತಿ ದಾಖಲಿಸಿಕೊಂಡ ನ್ಯಾಯಾಲಯ, ದೋಷಾರೋಪ ನಿಗದಿ ಕುರಿತ ವಿಚಾರಣೆಯನ್ನು ಸೆಪ್ಟೆಂಬರ್ 25ಕ್ಕೆ ಮುಂದೂಡಿತು.
Related Articles
Thank you for your comment. It is awaiting moderation.
Comments (0)