ಕೋವಿಡ್ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಜನರನ್ನು ಪ್ರಚೋದಿಸಿದ ಆರೋಪ; ಕಾಂಗ್ರೆಸ್ ಕಾರ್ಯಕರ್ತೆ ಖುಲಾಸೆ

ಬೆಂಗಳೂರು: ಬಿಹಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ, ಅದನ್ನು ಕರ್ನಾಟಕ ಪೊಲೀಸರ ಕೃತ್ಯವೆಂದು ಸುಳ್ಳು ಮಾಹಿತಿ ಹಬ್ಬಿಸುವ ಮೂಲಕ ಕೋವಿಡ್ ಸಂದರ್ಭದಲ್ಲಿ ಪೊಲೀಸರ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾ ಹರೀಶ್ ಅವರನ್ನು ಖುಲಾಸೆಗೊಳಿಸಿ ನಗರದ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಬೆಂಗಳೂರು ದಕ್ಷಿಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಕುರಿತು ಮಂಗಳವಾರ ವಿಚಾರಣೆ ನಡೆಸಿದ 47ನೇ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಿ. ಸಿದ್ದರಾಜು ಅವರು, ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಪದ್ಮಾ ಹರೀಶ್ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದರು. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.

ಪ್ರಕರಣವೇನು?
ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಷತಾ ಕುರಕುಂದಿ ಅವರು 2021ರ ಮೇ 12ರಂದು ದೂರು ನೀಡಿ, ಪೊಲೀಸ್ ಸಮವಸ್ತ್ರದಲ್ಲಿದ್ದ ಕೆಲವರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪದ್ಮಾ ಹರೀಶ್ ಎಂದು ಹೇಳಿಕೊಂಡಿದ್ದ ಮಹಿಳೆಯೊಬ್ಬರು ಅದನ್ನು ಕರ್ನಾಟಕ ಪೊಲೀಸರ ಕೃತ್ಯವೆಂದು ಬಿಂಬಿಸಿ ರಾಜ್ಯದ ಪೊಲೀಸರನ್ನು ನರಭಕ್ಷಕರೆಂದು ಕರೆದಿದ್ದರಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಗಳ ಜಾರಿಗೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ್ದರು ಎಂದು ವಿವರಿಸಿದ್ದರು.

ವಿಡಿಯೊ ತುಣುಕಿನ ಸತ್ಯಾಸತ್ಯತೆ ಪರಿಶೀಲಿಸಲಾಗಿ ಅದು ಬಿಹಾರದಲ್ಲಿ ನಡೆದಿದ್ದ ಘಟನೆ ಎಂದು ತಿಳಿದುಬಂದಿದ್ದು, 2020ರ ಏಪ್ರಿಲ್‌ನಲ್ಲೇ ಆ ವಿಡಿಯೊ ಜಾಲತಾಣಗಳಲ್ಲಿ ಹರಿದಾಡಿದೆ. ಹಳೇ ವಿಡಿಯೊ ಪ್ರಕಟಿಸಿ, ಸುಳ್ಳು ಮಾಹಿತಿ ಹಬ್ಬಿಸಿದ್ದಲ್ಲದೆ, ಪೊಲೀಸರ ಮೇಲೆ ಹಲ್ಲೆ ನಡೆಸಲು ಸಾರ್ವಜನಿಕರನ್ನು ಪ್ರಚೋದಿಸಲಾಗಿದೆ. ಆದ್ದರಿಂದ, ವಿಡಿಯೊ ಸೃಷ್ಟಿಸಿದವರು, ಹಂಚಿದವರು, ಧ್ವನಿ ನೀಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಿದ್ದ ಸೈಬರ್ ಪೊಲೀಸರು, ತನಿಖೆ ನಡೆಸಿ ಪದ್ಮಾ ಹರೀಶ್ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ವಾದ ಮಂಡಿಸಿದ್ದ ಪದ್ಮಾ ಪರ ವಕೀಲ ಸೂರ್ಯ ಮುಕುಂದರಾಜ್, ದೂರುದಾರರು ತಮ್ಮ ದೂರಿನೊಂದಿಗೆ ವಿಡಿಯೊ ತುಣಕನ್ನು ಲಗತ್ತಿಸಿಲ್ಲ, ಆರೋಪಿಯ ಮೊಬೈಲ್ ನಂಬರ್ ಉಲ್ಲೇಖಿಸಿಲ್ಲ, ಆರೋಪಪಟ್ಟಿಯಲ್ಲಿ ಕೊಟ್ಟ ಸ್ಕ್ರೀನ್‌ಶಾಟ್ ಆರೋಪಿಯ ವಿಡಿಯೊಗೆ ಸಂಬಂಧಪಟ್ಟಿಲ್ಲ, ಎಫ್ಎಸ್ಎಲ್‌ಗೆ ಕಳುಹಿಸಿದ ವಿಡಿಯೊದಲ್ಲಿ ಆರೋಪಿಯ ಧ್ವನಿ ಇಲ್ಲ ಎಂದು ವರದಿ ನೀಡಲಾಗಿದೆ. ಪೊಲೀಸರು ವಾಟ್ಸ್‌ಆ್ಯಪ್ ಗ್ರೂಪ್‌ನ ವಿವರ, ಸ್ವತಂತ್ರ ಸಾಕ್ಷಿಗಳ ವಿಚಾರಣೆ ಮಾಡಿಲ್ಲ, ಆರೋಪಿಯ ಮೊಬೈಲ್‌ನಲ್ಲಿ ವಿಡಿಯೊ ತುಣುಕು ಇರುವ ಬಗ್ಗೆ ಎಫ್‌ಎಸ್ಎಲ್ ವರದಿ ಇಲ್ಲ. ಆರೋಪಿತರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಎಂಬ ಕಾರಣಕ್ಕೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

Related Articles

Comments (0)

Leave a Comment