ಎಡಿಜಿಪಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆ ನೋಟಿಸ್‌ಗೆ ಸಿಎಟಿ ತಡೆಯಾಜ್ಞೆ

ಬೆಂಗಳೂರು: ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿ ಸರ್ಕಾರ ಜಾರಿಗೊಳಿಸಿದ್ದ ನೋಟಿಸ್‌ಗೆ ಬೆಂಗಳೂರಿನ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸರ್ಕಾರದ ನೋಟಿಸ್‌ ರದ್ದು ಕೋರಿ ಎಡಿಜಿಪಿ ಅಲೋಕ್‌ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ಸಿಎಟಿ ನ್ಯಾಯಾಂಗ ಸದಸ್ಯ ಬಿ.ಕೆ. ಶ್ರೀವಾತ್ಸವ ಅವರಿದ್ದ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿದೆ. ಜತೆಗೆ, ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದ್ದು, ಅರ್ಜಿಯನ್ನು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲು ಕಚೇರಿಗೆ ನಿರ್ದೇಶಿಸಿದೆ.

ಎಡಿಜಿಪಿ ಅಲೋಕ್‌ ಕುಮಾರ್‌ ವಿರುದ್ಧ 2019ರಲ್ಲಿ ಕೇಳಿ ಬಂದಿದ್ದ ದೂರವಾಣಿ ಮಾತುಕತೆ ಧ್ವನಿಮುದ್ರಣ ಸೋರಿಕೆಯ ಪ್ರಕರಣದ ಕುರಿತು ಇಲಾಖಾ ವಿಚಾರಣೆ ನಡೆಸುವಂತೆ 2025ರ ಮೇ 9ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೋಟಿಸ್‌ ನೀಡಿದ್ದರು. ಅದನ್ನು ಪ್ರಶ್ನಿಸಿ ಅಲೋಕ್‌ ಕುಮಾರ್‌ ಸಿಎಟಿ ಮೆಟ್ಟಿಲೇರಿದ್ದಾರೆ.

ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಅಲೋಕ್‌ ಕುಮಾರ್‌ ಪರ ವಕೀಲರು, ಇದೇ ಪ್ರಕರಣ ಸಂಬಂಧ ಈ ಹಿಂದೆ ಅರ್ಜಿದಾರರ ವಿರುದ್ಧ ಆರೋಪ ಮಾಡಲಾಗಿತ್ತು. ಸಿಬಿಐ ತನಿಖಾಧಿಕಾರಿಗಳು ಇದೇ ಪ್ರಕರಣವನ್ನು ಮುಕ್ತಾಯಗೊಳಿಸಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಸದ್ಯ ಅಲೋಕ್‌ ಕುಮಾರ್‌ ಅವರಿಗೆ ಮುಂಬಡ್ತಿ ನೀಡುವುದನ್ನು ತಡೆಹಿಡಿಯುವ ಉದ್ದೇಶದಿಂದ ಹಳೆಯ ಆರೋಪಗಳ ಮೇಲೆ ಮತ್ತೆ ಇಲಾಖಾ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದು ಆಕ್ಷೇಪಿಸಿದ್ದರು.

 

Related Articles

Comments (0)

Leave a Comment