ನಟ ದರ್ಶನ್‌ ಜೀವನ, ರೇಣುಕಾಸ್ವಾಮಿ ಕೊಲೆ ಆಧಾರಿತ ಕಥೆ ಆರೋಪ; ‘ಬಾಸ್‌’ ಸಿನಿಮಾ ಬಿಡುಗಡೆಗೆ ತಡೆ ನೀಡಿದ ಸೆಷನ್ಸ್ ಕೋರ್ಟ್

ಬೆಂಗಳೂರು: ನಟ ದರ್ಶನ್‌ ಮತ್ತವರ ಪತ್ನಿ ವಿಜಯಲಕ್ಷ್ಮಿ ಖಾಸಗಿ ಜೀವನ ಹಾಗೂ ರೇಣುಕಾಸ್ವಾಮಿ ಕೊಲೆ ಆಧಾರಿತ ಕಥೆ ಹೊಂದಿದೆ ಎನ್ನಲಾದ ‘ಬಾಸ್‌’ ಚಲನಚಿತ್ರವನ್ನು ಚಿತ್ರಮಂದಿರ ಅಥವಾ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನಟ ದರ್ಶನ್‌ ಹಾಗೂ ವಿಜಯಲಕ್ಷ್ಮಿ ಸಲ್ಲಿಸಿರುವ ಅಸಲು ದಾವೆಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ನಗರದ 17ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ. ಅನಿತಾ ಅವರು ನಿರ್ದೇಶಕ ವಿ. ಲವ ಹಾಗೂ ನಿರ್ಮಾಣ ಸಂಸ್ಥೆ ಸಿರಿ ಪ್ರೊಡಕ್ಷನ್ಸ್‌ಗೆ ಈ ನಿರ್ದೇಶನ ನೀಡಿದ್ದಾರೆ.

ಜತೆಗೆ, ಪ್ರಕರಣ ಸಂಬಂಧ ಸಿರಿ ಪ್ರೊಡಕ್ಷನ್ಸ್‌, ವಿ. ಲವ, ಸಿಬಿಎಫ್‌ಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಮೆಟಾ/ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌, ಗೂಗಲ್‌, ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ಫಿಲ್ಮಿ ಬೀಟ್‌, ಟಿವಿ೦ ಕನ್ನಡ, ಜೀ ಕನ್ನಡ ನ್ಯೂಸ್‌ ಅಶೋಕ್‌ ಕುಮಾರ್‌ ಅಚರಿಗೆ ಸಮನ್ಸ್‌ ಮತ್ತು ನೋಟಿಸ್‌ ಜಾರಿ ಮಾಡಿರುವ ನ್ಯಾಯಾಲಯ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿದೆ. ಇದ ಏಪ್ರಿಲ್‌ 14ಕ್ಕೆ ‘ಬಾಸ್‌’ ಚಲನಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿತ್ತು ಎನ್ನಲಾಗಿದೆ.

ಕೋರ್ಟ್ ಆದೇಶವೇನು?
ದರ್ಶನ್‌ ಮತ್ತು ವಿಜಯಲಕ್ಷ್ಮಿ ಅವರ ಜೀವನ, ರೇಣುಕಾಸ್ವಾಮಿ ಕೊಲೆ ಪ್ರಕರಣ, ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ದೂರುದಾರರ ಖಾಸಗಿ ಜೀವನ, ಕುಟುಂಬ, ಘನತೆ, ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುವ ಕ್ರಿಮಿನಲ್‌ ಪ್ರಕರಣ ಅಥವಾ ಇನ್ನಾವುದೇ ರೀತಿಯಲ್ಲಿ ದೂರುದಾರರ ವರ್ಚಸ್ಸು, ಇಚ್ಛೆ, ವ್ಯಕ್ತಿತ್ವದ ಹಕ್ಕುಗಳು ಅಥವಾ ಪ್ರಚಾರದ ಅಂಶಗಳನ್ನು ಒಳಗೊಂಡಿರುವ ‘ಬಾಸ್‌’ ಚಲನಚಿತ್ರದ ನಿರ್ಮಾಣ, ಚಿತ್ರೀಕರಣ, ಸಂಕಲನ, ಪ್ರಚಾರ, ಮಾರ್ಕೆಟಿಂಗ್‌, ಬಿಡುಗಡೆ, ಹಂಚಿಕೆ, ಸ್ಟ್ರೀಮಿಂಗ್‌, ಮಾರಾಟ, ಪರವಾನಗಿಯನ್ನು ಸಿನಿಮಾ ಅಥವಾ ಒಟಿಟಿ ವೇದಿಕೆಯಲ್ಲಿ ಮುಂದಿನ ವಿಚಾರಣೆವರೆಗೆ ಬಳಕೆ ಮಾಡಬಾರದು. ಪೋಸ್ಟರ್‌, ಟೀಸರ್‌, ಮಾಧ್ಯಮ ಗೋಷ್ಠಿ, ಸಂದರ್ಶನ ಇತ್ಯಾದಿ ಕಡೆ ದೂರುದಾರರ ಉಲ್ಲೇಖ ಮಾಡಬಾರದು. ಇದು ಸಿನಿಮಾ/ವೆಬ್‌ ಸರಣಿಗೂ ಅನ್ವಯಿಸಲಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ದರ್ಶನ್ ದಂಪತಿಯ ಆಕ್ಷೇಪವೇನು?
ಚಿತ್ರದ ಟೀಸರ್‌ನಲ್ಲಿರುವ ಆಡಿಯೋ ಮತ್ತು ದೃಶ್ಯಗಳನ್ನು ಸಾಮಾನ್ಯ ಪ್ರೇಕ್ಷಕರು ನೋಡಿದಾಗ, ಅದು ತಮ್ಮ ಜೀವನ ಮತ್ತು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಭಾವಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ. ಬಾಸ್ ಚಲನಚಿತ್ರದ ಟೀಸರ್ ಮಾರ್ಚ್ 9 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಚಿತ್ರವು ಸಾರ್ವಜನಿಕವಾಗಿ ಲಭ್ಯವಿರುವ ಅಂಶಗಳು ನಟನ ವಿರುದ್ಧದ ಕೊಲೆ ಪ್ರಕರಣ, ಅದರ ತನಿಖೆ ಮತ್ತು ವಿಚಾರಣೆಗೆ ನೇರ ಹೋಲಿಕೆ ಹೊಂದಿವೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿದೆ.

ಕ್ರಿಮಿನಲ್ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಗಳ ಕುರಿತು ವರದಿ ಪ್ರಸಾರ ಮಾಡದಂತೆ ಈ ಹಿಂದೆ ನ್ಯಾಯಾಲಯದಿಂದ ಐದು ಬಾರಿ ತಡೆಯಾಜ್ಞೆ ಪಡೆದಿದ್ದರೂ, ಮಾಧ್ಯಮಗಳು ವಿಚಾರಣೆ ಕುರಿತು ಹಾಗೂ ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುತ್ತಿವೆ. ಈ ಚಿತ್ರ ಬಿಡುಗಡೆಯಾದರೆ ತಮ್ಮ ಗೌರವಕ್ಕೆ ಸರಿಪಡಿಸಲಾಗದ ನಷ್ಟವಾಗುವ ಜತೆಗೆ ತಮ್ಮ ಗೌಪ್ಯತೆಯ ಹಕ್ಕು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕುಗಳ ಉಲ್ಲಂಘನೆಯಾಗಲಿದೆ. ಆದ್ದರಿಂದ,‌ ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಬೇಕೆಂದು ದರ್ಶನ್ ದಂಪತಿ ಅರ್ಜಿಯಲ್ಲಿ ಕೋರಿದ್ದಾರೆ.

Related Articles

Comments (0)

Leave a Comment