- ಟ್ರಯಲ್ ಕೋರ್ಟ್
- Like this post: 12
ಕಸಾಪ ಮಾಜಿ ಅಧ್ಯಕ್ಷ ಮಾಯಣ್ಣಗೆ 10 ಲಕ್ಷ ರೂ. ದಂಡ; 3 ತಿಂಗಳೊಳಗೆ ನಷ್ಟ ಪಾವತಿಗೆ ಕೋರ್ಟ್ ಆದೇಶ
- by LegalSamachar
- March 14, 2025
- 793 Views

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ನೌಕರರು ಮತ್ತು ಅಧಿಕಾರಿಗಳ ಕಲ್ಯಾಣ ಸಂಘದ ವಿರುದ್ಧ ಯಾವುದೇ ರೀತಿಯ ಅಪಪ್ರಚಾರ ಮಾಡದಂತೆ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹಾಗೂ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಮತ್ತವರ ಬೆಂಬಲಿಗರನ್ನು ನಿರ್ಬಂಧಿಸಿ ಶಾಶ್ವತ ಪ್ರತಿಬಂಧಕಾದೇಶ ಹೊರಡಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, 3 ತಿಂಗಳ ಒಳಗೆ ದೂರುದಾರ ಸಂಘಕ್ಕೆ 10 ಲಕ್ಷ ರೂ. ನಷ್ಟ ಪಾವತಿಸುವಂತೆ ಮಾಯಣ್ಣ ಅವರಿಗೆ ಆದೇಶಿಸಿದೆ.
ಸಂಘದ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಆರೋಪಗಳನ್ನು ಮಾಡಿರುವ ಮಾಯಣ್ಣ ಅವರಿಗೆ 10 ಲಕ್ಷ ರೂ. ನಷ್ಟ ಪರಿಹಾರ ಪಾವತಿಸುವಂತೆ ಆದೇಶಿಸಬೇಕು. ಭವಿಷ್ಯದಲ್ಲಿ ಸಂಘದ ಅಥವಾ ಸಂಘದ ಅಧ್ಯಕ್ಷ ಅಮೃತ್‌ರಾಜ್ ಅವರ ಬಗ್ಗೆ ಯಾವುದೇ ರೀತಿಯಲ್ಲಿ ಮಾನಹಾನಿಕರ ಹೇಳಿಕೆ ನೀಡದಂತೆ ಮಾಯಣ್ಣ ಮತ್ತವರ ಬೆಂಬಲಿಗರಿಗೆ ಶಾಶ್ವತ ಪ್ರತಿಬಂಧಕಾದೇಶ ಹೊರಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅಸಲು ದಾವೆಯನ್ನು ಪುರಸ್ಕರಿಸಿರುವ 24ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶೆ ರೇಣುಕಾ ಡಿ. ರಾಯ್ಕರ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ದೂರುದಾರ ಸಂಘದ ಪರವಾಗಿ ವಕೀಲ ದೇವಿ ಪ್ರಸಾದ್ ಶೆಟ್ಟಿ ವಾದ ಮಂಡಿಸಿದ್ದರು.
ಪ್ರತಿವಾದಿ ಮಾಯಣ್ಣ ಅವರು ದೂರುದಾರರ ವಾದಗಳನ್ನು ಹಾಗೂ ದಾಖಲೆಗಳನ್ನು ವಿರೋಧಿಸಿ ಯಾವುದೇ ಲಿಖಿತ ಹೇಳಿಕೆಗಳನ್ನು ಸಲ್ಲಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರ ಮೌಖಿಕ ಹಾಗೂ ದಾಖಲೆಗಳ ಸಾಕ್ಷ್ಯಗಳು ಪ್ರಶ್ನಿಸಲ್ಪಡದೆ ಹಾಗೇ ಉಳಿದಿವೆ. ಇದರಿಂದ, ಮಾಯಣ್ಣ ಅವರು ಮಾಡಿರುವ ವಿವಿಧ ಸುಳ್ಳು ದೂರುಗಳು, ಅಪಪ್ರಚಾರಗಳಿಂದ ಸಂಘ ಮತ್ತು ಅದರ ಅಧ್ಯಕ್ಷರು ಅನನುಕೂಲತೆ ಮತ್ತು ಕಿರುಕುಳವನ್ನು ಅನುಭವಿಸಿದ್ದಾರೆ ಎಂಬುದನ್ನು ದೂರುದಾರರು ಸಾಬೀತು ಮಾಡಿದಂತಾಗಿದೆ. ಆದ್ದರಿಂದ, ದೂರುದಾರರು ಮನವಿ ಮಾಡಿರುವಂತೆ ಶಾಶ್ವತ ಪ್ರತಿಬಂಧಕಾದೇಶ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
10 ಲಕ್ಷ ರೂ. ನಷ್ಟ ಪಾವತಿಗೆ ಆದೇಶ:
ದೂರುದಾರ ಸಂಘ ಮತ್ತು ಅದರ ಪದಾಧಿಕಾರಿಗಳು, ಅಧ್ಯಕ್ಷ ಅಮೃತ್‌ರಾಜ್ ಅಥವಾ ಅವರ ಕುಟುಂಬ ಸದಸ್ಯರು ಮತ್ತು ಅವರಿಗೆ ಸಂಬಂಧಪಟ್ಟ ವ್ಯಕ್ತಿಗಳ ಬಗ್ಗೆ ಮಾಯಣ್ಣ ಅಥವಾ ಅವರ ಕಡೆಯವರು ಯಾವುದೇ ರೀತಿಯ ಚಾರಿತ್ರ್ಯ ವಧೆ ಅಥವಾ ಮಾನನಷ್ಟಕ್ಕೆ ಒಳಪಡಿಸುವಂತಹ ವಿಷಯಗಳನ್ನು ಬರೆಯುವುದು, ಪ್ರಸಾರ ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರಕ್ಕೆ ಅವಕಾಶ ನೀಡುವುದು ಸೇರಿ ಯಾವುದೇ ರೀತಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಳ್ಳುವುದು ಅಥವಾ ವರ್ತಿಸುವುದು ಅಥವಾ ನಕಾರಾತ್ಮಕವಾಗಿ ತೊಡಗುವುದಕ್ಕೆ ಶಾಶ್ವತ ಪ್ರತಿಬಂಧಕಾದೇಶದ ಮೂಲಕ ನಿರ್ಬಂಧಿಸಲಾಗಿದೆ ಎಂದು ಜನವರಿ 4ರಂದು ಹೊರಡಿಸಿರುವ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ. ಜತೆಗೆ, ಆದೇಶದ ದಿನಾಂಕದಿಂದ 3 ತಿಂಗಳ ಒಳಗೆ ದೂರುದಾರ ಸಂಘಕ್ಕೆ 10 ಲಕ್ಷ ರೂ. ನಷ್ಟ ಪರಿಹಾರ ಪಾವತಿಸುವಂತೆ ಪ್ರತಿವಾದಿ ಮಾಯಣ್ಣ ಅವರಿಗೆ ನ್ಯಾಯಾಲಯ ಆದೇಶಿಸಿದೆ.
Related Articles
Thank you for your comment. It is awaiting moderation.
Comments (0)