ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ್ ರೆಡ್ಡಿ ಮರು ಆಯ್ಕೆ; ಎರಡು ಸಾವಿರಕ್ಕೂ ಅಧಿಕ ಮತಗಳಿಂದ ಜಯಭೇರಿ

ಬೆಂಗಳೂರು: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ (ಫೆಬ್ರವರಿ 16) ನಡೆದ ಚುನಾವಣೆಯಲ್ಲಿ 2 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿರುವ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಿ.ಎಸ್. ಗಿರೀಶ್ ಕುಮಾರ್ ಉಪಾಧ್ಯಕ್ಷರಾಗಿ, ಎಚ್.ವಿ. ಪ್ರವೀಣ್ ಗೌಡ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದರೆ, ವಕೀಲೆ ಶ್ವೇತಾ ರವಿಶಂಕರ್ ಖಜಾಂಚಿಯಾಗಿ ಆಯ್ಕೆಯಾದರು.

ಬೆಂಗಳೂರು ವಕೀಲರ ಸಂಘಕ್ಕೆ 2025-28ರ ಅವಧಿಗೆ ನಡೆದ ಚುನಾವಣೆಯಲ್ಲಿ 13 ಸಾವಿರಕ್ಕೂ ಅಧಿಕ ಮಂದಿ ಮತ ಚಲಾಯಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾಗಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ 2,302 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ, ಎರಡನೇ ಅವಧಿಗೆ ಮರು ಆಯ್ಕೆಯಾಗಿದ್ದಾರೆ.

ಮತ ಎಣಿಕೆಯ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ವಿವೇಕ್‌ ಸುಬ್ಬಾರೆಡ್ಡಿ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದರೆ, ಮಾಜಿ ಅಧ್ಯಕ್ಷರೂ ಆದ ಎ.ಪಿ.ರಂಗನಾಥ್ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಒಟ್ಟಾರೆ ಚಲಾವಣೆಯಾದ ಮತಗಳಲ್ಲಿ ವಿವೇಕ್ ಸುಬ್ಬಾರೆಡ್ಡಿ ಪರವಾಗಿ 6,820 ಮತಗಳು ಚಲಾವಣೆಯಾಗಿದ್ದರೆ, ಎ.ಪಿ.ರಂಗನಾಥ್ ಪರವಾಗಿ 4,518 ಮತಗಳು ಚಲಾವಣೆಯಾಗಿದ್ದವು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಉಳಿದ ಅಭ್ಯರ್ಥಿಗಳಾದ ಆರ್. ರಾಜಣ್ಣ 1,473 ಮತಗಳು, ಟಿ.ಜಿ. ರವಿ 378 ಮತಗಳು, ನಂಜಪ್ಪ ಕಾಳೇಗೌಡ 123 ಹಾಗೂ ಟಿ.ಎ. ರಾಜಶೇಖರ 90 ಮತಗಳನ್ನು ಪಡೆದಿದ್ದಾರೆ.

ಸಿ.ಎಸ್. ಗಿರೀಶ್ ಕುಮಾರ್ ಉಪಾಧ್ಯಕ್ಷ, ಎಚ್.ವಿ. ಪ್ರವೀಣ್ ಗೌಡ ಪ್ರಧಾನ ಕಾರ್ಯದರ್ಶಿ:
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಿ.ಎಸ್. ಗಿರೀಶ್‌ ಕುಮಾರ್ 5,060 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಸಮೀಪ ಸ್ಪರ್ಧಿ ಮುನಿಯಪ್ಪ ಸಿ.ಆರ್‌. ಗೌಡ (3,128 ಮತ) ವಿರುದ್ಧ 1,932 ಮತಗಳ ಅಂತರದಿಂದ ಗೆದ್ದಿರುವ ಗಿರೀಶ್ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಎ. ವೇದಮೂರ್ತಿ 2,806 ಮತಗಳು, ಟಿ.ಸಿ. ಸಂತೋಷ್‌ 1,542 ಮತಗಳು, ಆರ್‌. ಸುವರ್ಣಾ 421 ಮತ್ತು ಕೆ. ವೆಂಕಟ ರೆಡ್ಡಿ 237 ಮತಗಳನ್ನು ಪಡೆದು ಸೋಲುಂಡಿದ್ದಾರೆ.

ಎಚ್.ವಿ. ಪ್ರವೀಣ್ ಗೌಡ 4,854 ಮತಗಳನ್ನು ಪಡೆಯುವ ಮೂಲಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಮಾಜಿ ಖಜಾಂಚಿ ಎಂ.ಟಿ. ಹರೀಶ್‌ 3,728 ಮತಗಳು, ಮಾಜಿ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ 2,321 ಮತಗಳನ್ನು ಪಡೆದರೆ, ಕೆ. ಅಕ್ಕಿ ಮಂಜುನಾಥ್‌ ಗೌಡ ಹಾಗೂ ಎಂ.ಎಚ್‌. ಚಂದ್ರಶೇಖರ್‌ ಕ್ರಮವಾಗಿ 2,188 ಹಾಗೂ 124 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಖಜಾಂಚಿಯಾಗಿ ಶ್ವೇತಾ ರವಿಶಂಕರ್ ಆಯ್ಕೆ:
ವಕೀಲರ ಸಂಘದ ಖಜಾಂಚಿ ಸ್ಥಾನವನ್ನು ಕಡ್ಡಾಯವಾಗಿ ಮಹಿಳೆಯರಿಗೆ ಮೀಸಲಿಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ ಮಹಿಳಾ ಮೀಸಲಾತಿ ಕಲ್ಪಿಸಲಾಗಿದ್ದ ಖಜಾಂಚಿ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿತ್ತು. ಇದೀಗ, ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ವಕೀಲೆ ಶ್ವೇತಾ ರವಿಶಂಕರ್ 2,950 ಮತಗಳೊಂದಿಗೆ ಗೆದ್ದು ಖಜಾಂಚಿ ಹುದ್ದೆ ಅಲಂಕರಿಸಿದ್ದಾರೆ.

ತೀವ್ರ ಪೈಪೋಟಿ ಏರ್ಪಟ್ಟಿದ್ದ ಖಜಾಂಚಿ ಸ್ಥಾನದ ಚುನಾವಣೆಯಲ್ಲಿ ಅಂತಿಮವಾಗಿ ವಕೀಲೆ ಶ್ವೇತಾ ರವಿಶಂಕರ್ 1,090 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ವಕೀಲೆ ಗೀತಾ ರಾಜ್ 1,860 ಮತಗಳಿಸಿ ಎರಡನೇ ಸ್ಥಾನ ಅಲಂಕರಿಸಿದರೆ, ಮಮತಾ ಕೆ.ವಿ. 1,760 ಮತಗಳು ಹಾಗೂ ಹೇಮಲತಾ ವಿ. 1,142 ಮತಗಳೊಂದಿಗೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ವಕೀಲೆ ಶೈಲಜಾ ಕೆ. 1,267 ಮತಗಳನ್ನು ಪಡೆದರೆ ಉಳಿದ ಯಾವ ಅಭ್ಯರ್ಥಿಗಳೂ ಸಾವಿರ ಮತಗಳ ಗಡಿ ದಾಟಲಿಲ್ಲ.

Related Articles

Comments (0)

Leave a Comment