ರಾಜೀನಾಮೆ ಕೊಡುವುದು ನೈತಿಕತೆಗೆ ಸಂಬಂಧಿಸಿದ ವಿಚಾರ – ಸಿಎಚ್‌ಎಚ್

ಮುಡಾ ಹಗರಣದ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲೇ ಸ್ನೇಹಮಯಿ ಕೃಷ್ಣ ಹಾಗೂ ಟಿ.ಜೆ.‌ಅಬ್ರಹಾಂ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ. ಈ ಮಧ್ಯೆ, ರಾಜ್ಯ ಪಾಲರು ಮುಖ್ಯಮಂತ್ರಿ ಸಿದ್ದಾರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಆ.17ರಂದು ಆದೇಶ ಹೊರಡಿಸಿದ್ದಾರೆ. ಇದರಿಂದ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಬಲವಾಗಿ ಆಗ್ರಹಿಸುತ್ತಿವೆ. ಆದರೆ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ‌ ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆ? ರಾಜೀನಾಮೆ ಸಲ್ಲಿಕೆ ಕಾನೂನಿನ ಅಡಿಯಲ್ಲಿ ಅನಿವಾರ್ಯವೇ? ರಾಜೀನಾಮೆ ನೀಡದೇ ಪ್ರಕರಣವನ್ನು ಮುಖ್ಯಮಂತ್ರಿಗಳು ಹೇಗೆ ಎದುರಿಸಬಹುದು? ಪ್ರಕರಣದ ಕುರಿತ ಸಂಭಾವ್ಯ ಕಾನೂನಾತ್ಮಕ ಬೆಳವಣಿಗೆಗಳು ಹಾಗೂ ಪರಿಣಾಮಗಳ ಬಗ್ಗೆ “ಲೀಗಲ್ ಸಮಾಚಾರ್” ಜತೆಗೆ ರಾಜ್ಯದ ಖ್ಯಾತ ಕ್ರಿಮಿನಲ್ ವಕೀಲರಾದ ಸಿ.ಎಚ್. ಹನುಮಂತರಾಯ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿ.ಎಚ್. ಹನುಮಂತರಾಯ
ಹಿರಿಯ ವಕೀಲರು

ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆತಿರುವುದರಿಂದ ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸುವುದು ಕಡ್ಡಾಯವೇ?
ಪ್ರಾಸಿಕ್ಯೂಷನ್ ಗೆ ಅನುಮತಿ ಮಂಜೂರಾದ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಕಾನೂನಾತ್ಮಕ ಅಗತ್ಯತೆ ಅಲ್ಲ. ನೈತಿಕತೆಗೆ ಸಂಬಂಧಿಸಿದಂತೆ ವಿಚಾರವಷ್ಟೇ.

ರಾಜೀನಾಮೆ ಸಲ್ಲಿಸದಿದ್ದರೆ ಏನಾಗಬಹುದು?
ನೋಡಿ.. ರಾಜಕಾರಣದಲ್ಲಿ ಇರುವುದು ಅಂದರೆ ಸಾಮಾಜಿಕ ಬದುಕಿನಲ್ಲಿ ಇರುವುದು ಎಂದರ್ಥ. ಪ್ರಾಸಿಕ್ಯೂಷನ್‌ಗೆ ಅನುಮತಿ ಮಂಜೂರಾದ ತಕ್ಷಣ ತಮ್ಮ ನೈತಿಕಯ ಬದ್ಧತೆ ತೋರಿಸಬೇಕಾಗುತ್ತದೆ. ರಾಜೀನಾಮೆ ನೀಡದೇ ನಿರ್ಲಕ್ಷ್ಯ ಮಾಡಿದರೆ ವಿರೋಧ ಪಕ್ಷಗಳಿಗೆ ಹೋರಾಟ ಮಾಡಲು ಒಂದು ಅಸ್ತ್ರ ದೊರಕಿದಂತಾಗಬಹುದು.

ರಾಜೀನಾಮೆ ನೀಡದೇ ಪ್ರಕರಣವನ್ನು ಹೇಗೆ ಎದುರಿಸಬಹದು?
ರಾಜೀನಾಮೆ ನೀಡದೆಯೇ ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಕಾನೂನು ಹೋರಾಟ ಮಾಡಲು ಅವಕಾಶ ಮುಖ್ಯಮಂತ್ರಿಗಳ ಮುಂದೆ ಇದ್ದೇ ಇರುತ್ತದೆ. ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿ ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ನ್ಯಾಯಾಲಯ ಅನುಮತಿಯನ್ನು ಎತ್ತಿಹಿಡಿದರೆ ಸಿಎಂಗೆ ಸಂಕಷ್ಟ ಗ್ಯಾರಂಟಿಯೇ?
ಪ್ರಾಸಿಕ್ಯೂಷನ್‌ಗೆ ದೊರೆತ‌ ಅನುಮತಿ ಮುಂದಿಟ್ಟುಕೊಂಡು ಅನುಮತಿ ಸ್ವೀಕರಿಸಿದವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಬಹುದು.‌ ಆ ಅನುಮತಿ ಬಗ್ಗೆ ನ್ಯಾಯಾಲಯ ವಿಮರ್ಶೆ ನಡೆಸುತ್ತದೆ. ಅನುಮತಿ ನೀಡಿರುವ ಕ್ರಮವನ್ನು ಎತ್ತಿಹಿಡಿದರೆ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಕಠಿಣ ಪರಿಸ್ಥಿತಿ ಎದುರಾಗಬಹುದು. ನ್ಯಾಯಾಲಯ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ರದ್ದುಪಡಿಸಿದರೆ ಮುಖ್ಯಮಂತ್ರಿಗಳಿಗೆ ಎದುರಾಗಿರುವ ಪ್ರಾಸಿಕ್ಯೂಷನ್ ಕಂಟಕ ನಿವಾರಣೆ ಆಗಲಿದೆ. ಆಗ ವಿರೋಧ ಪಕ್ಷದವರು ಈ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡುವ ಅಥವಾ ಪ್ರಶ್ನೆ ಮಾಡುವ ನೈತಿಕತೆ ಕಳೆದುಕೊಳ್ಳುತ್ತಾರೆ. ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವಿಚಾರವು ನೈತಿಕತೆ ಗೆ ಸಂಬಂಧಿಸಿದ ವಿಚಾರ ಹೊರತು ಅದನ್ನು ಮೀರಿದ ಕಾನೂನಾತ್ಮಕ ವಿಚಾರವೇನಲ್ಲ.

ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ 2010ರಲ್ಲಿ ಅಂದಿನ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ‌ ಪಡೆದ ವಕೀಲರಾದ ಸಿರಾಜಿನ್ ಪಾಷಾ ಹಾಗೂ ಬಾಲರಾಜ್ ಪರ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಪ್ರಕರಣದ ತನಿಖೆಗೆ ಶಿಫಾರಸು ಆಗುವುದರಲ್ಲಿ ಪ್ರಮುಖ‌ ಪಾತ್ರ ನಿರ್ವಹಿಸಿದ್ದವರು ವಕೀಲ ಸಿ.ಎಚ್. ಹನುಮಂತರಾಯರು.‌ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕಿದ್ದರಿಂದ ಅಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 14 ವರ್ಷಗಳ ನಂತರ ಓರ್ವ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಕರ್ನಾಟಕದಲ್ಲಿ “ಪ್ರಾಸಿಕ್ಯೂಷನ್ ಸ್ಯಾಂಕ್ಷನ್” ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.

ಅನುಮತಿ ಇಲ್ಲದೆ‌ ದೂರು ದಾಖಲಿಸಬಹುದೇ?
ಪ್ರಾಸಿಕ್ಯೂಷನ್‌ಗೆ ಅನುಮತಿ ಇಲ್ಲದ ವೇಳೆ ದೂರು ಸಲ್ಲಿಕೆಯಾದ ಸಂದರ್ಭದಲ್ಲಿ ಆ ದೂರನ್ನು ನ್ಯಾಯಾಲಯ ವಜಾಗೊಳಿಸುವುದು ಸಾಮಾನ್ಯ. ಪ್ರಾಸಿಕ್ಯೂಷನ್ ಗೆ ಅನುಮತಿ ಇದ್ದ‌ ಸಂದರ್ಭದಲ್ಲಿ ದೂರನ್ನು ವಜಾಗೊಳಿಸುವ ಸಾಧ್ಯತೆ ಕಡಿಮೆ‌.

ಈಗಾಗಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ಇಲ್ಲದಿದ್ದರೂ ಮುಖ್ಯಮಂತ್ರಿ ವಿರುದ್ಧ ದೂರು ದಾಖಲಾಗಿರುವುದರಿಂದ ಆ.20ರಂದು ನ್ಯಾಯಾಲಯದಿಂದ‌ ಯಾವ ರೀತಿಯ ತೀರ್ಪು ಹೊರ ಬರಬಹುದು?
ಕಾದು ನೋಡಬೇಕಿದೆ.

ತನಿಖೆಗೆ ನ್ಯಾಯಾಲಯ ಆದೇಶಿಸಿದಾಗ ಅದರ ಆಧಾರದ ಮೇಲೆ ತನಿಖಾಧಿಕಾರಿಗಳು ಎಫ್‌ಐ‌ಆರ್ ದಾಖಲಿಸಿದರೆ, ಅದನ್ನು ಪ್ರಶ್ನಿಸಬಹುದೇ? ಯಾವ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು?
ಖಂಡಿತವಾಗಿಯೂ ಪ್ರಶ್ನಿಸಬಹುದು. ಎಫ್ ಐ ಆರ್, ಹಾಗೂ ಅಧೀನ ನ್ಯಾಯಾಲಯಕ್ಕೆ ನೀಡಿರುವ ದೂರು, ಆ ದೂರಿನ ಮೇಲೆ ನ್ಯಾಯಾಲಯ ಮಾಡಿರುವ ಆದೇಶ (ರೆಫರೆನ್ಸ್) ರದ್ದುಪಡಿಸಲು ಕೋರಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ಗೆ ಹೋಗಲು ಅವಕಾಶವಿದೆ.

ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೆ, ಮುಂದಿನ ಪರಿಣಾಮವೇನು?
ತಡೆಯಾಜ್ಞೆ ದೊರೆತರೆ, ಆಗ ಕಾನೂನಾತ್ಮಕವಾಗಿ ಮುಖ್ಯಮಂತ್ರಿಗಳು ಸ್ಟ್ರಾಂಗ್ ಆಗಿರಬಹುದು ಅಷ್ಟೇ. ಆದರೆ, ಮುಖ್ಯಮಂತ್ರಿಗಳಿಗೆ ನೈತಿಕವಾಗಿ‌ ಹಾನಿಯಂತೂ ಆಗುತ್ತದೆ. ಕಾರಣ, ಪ್ರಾಸಿಕ್ಯೂಷನ್‌ಗೆ ನೀಡಿದ ಅನುಮತಿಯನ್ನು ಒಂದು ನ್ಯಾಯಾಲಯ ಪರಿಗಣಿಸಿಬಿಟ್ಟಿದೆ ಅಲ್ಲವೇ. ಮೇಲ್ನೋಟಕ್ಕೆ ಮುಖ್ಯಮಂತ್ರಿಗಳ ಮೇಲಿನ ಆರೋಪಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಾಗಿರುತ್ತದೆ ಹಾಗೂ ಅವರ ವಿರುದ್ಧ ಒಂದು ಪ್ರಕರಣ ಇದೆ ಎಂಬುದಾಗಿ ನ್ಯಾಯಾಲಯ ಹೇಳಿದಂತಾಗಿರುತ್ತದೆ. ದೂರು ದಾಖಲಾದ ನಂತರ, ಆ ಬಗ್ಗೆ ನ್ಯಾಯಾಲಯ ತನ್ನದೇ ಆದ ಪರೀಕ್ಷೆ ಮಾಡುತ್ತದೆ. ಆ ಪರೀಕ್ಷೆಯನ್ನು ದೃಢಪಡಿಸಿಕೊಳ್ಳಲು ತನಿಖೆ ಅಥವಾ ವಿಚಾರಣೆ ನಡೆಸಲು ಆದೇಶ ಮಾಡಿರುತ್ತದೆ. ಆಗ ಅದಕ್ಕೆ ಸಾಕಷ್ಟು ತೂಕ ಇರುತ್ತದೆ.

ಮುಖ್ಯಮಂತ್ರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು ಕಡ್ಡಾಯವೇ?
ನೋಡಿ.. ಕಾನೂನಿನಲ್ಲಿ ತನಿಖೆಗೂ, ವಿಚಾರಣೆಗೂ ವ್ಯತ್ಯಾಸವಿದೆ. ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) – 1973ರ ಸೆಕ್ಷನ್‌ 153(3) ಅಡಿಯಲ್ಲಿ ನ್ಯಾಯಾಲಯ ತನಿಖೆಗೆ ಆದೇಶ ಮಾಡಬಹುದು. ಆ ಸಂದರ್ಭದಲ್ಲಿ ತನಿಖಾಧಿಕಾರಿಗಳು ಎಫ್‌ಐಆರ್‌ ದಾಖಲಿಸಬೇಕಾಗುತ್ತದೆ. ಆದರೆ, ಸಿಆರ್‌ಪಿಸಿ ಸೆಕ್ಷನ್‌ 202 ಅಡಿಯಲ್ಲಿ ನ್ಯಾಯಾಲಯವು ಪ್ರಕರಣ ಕುರಿತು ಕೇವಲ ವಿಚಾರಣೆ ನಡೆಸಿ ವರದಿ ಸಲ್ಲಿಸಲು ತನಿಖಾಧಿಕಾರಿಗೆ ಸೂಚನೆ ನೀಡಬಹುದು. ಆ ವೇಳೆ ದಾಖಲೆಗಳ ಪರಿಶೀಲನೆ ನಡೆಸಿ ತನಿಖಾಧಿಕಾರಿಗಳು ವಿಚಾರಣಾ ವರದಿ ಸಲ್ಲಿಸಬೇಕಾಗುತ್ತದೆ. ಇಂತಹ ಆದೇಶ ಪ್ರಕಟವಾದಾಗ ಎಫ್‌ಐಆರ್ ದಾಖಲಿಸುವುದಿಲ್ಲ. ಅದರಿಂದ, ಆರೋಪಿತರಿಗೆ ಯಾವುದೇ ಬಂಧನದ ಭೀತಿಯೂ ಇರುವುದಿಲ್ಲ. ಆದರೆ, ವಿಚಾರಣಾ ವರದಿಯನ್ನು ನ್ಯಾಯಾಲಯ ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಒಪ್ಪಿಕೊಂಡ ಸಂದರ್ಭದಲ್ಲಿ ವರದಿ ಆಧಾರದ ಮೇಲೆ ನ್ಯಾಯಾಲಯ ಕಾಗ್ನಿಜೆನ್ಸ್‌ ತೆಗೆದುಕೊಂಡು ಆರೋಪಿಗೆ ಸಮನ್ಸ್‌ ಜಾರಿ ಮಾಡಬಹುದು. ಆಗ ಆರೋಪಿಗೆ ಬಂಧನ ಭೀತಿ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಆರೋಪಿತರು ನಿರೀಕ್ಷಣಾ ಜಾಮೀನು ಕೋರಿ ಸಮನ್ಸ್‌ ಜಾರಿ ಮಾಡಿದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಹುದು. ಇಲ್ಲವೇ ಇಡೀ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆ ರದ್ದತಿಗೆ ಅಥವಾ ನಿರೀಕ್ಷಣಾ ಜಾಮೀನಿಗೆ ಕೋರಿ ಹೈಕೋರ್ಟ್‌ ಕದ ತಟ್ಟಬಹುದು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಖಾಸಗಿ ದೂರಿನ ವಿಚಾರಣೆ ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ. ಆ.20ರಂದು ಆದೇಶ ಹೊರ ಬೀಳಲಿದೆ.

Related Articles

Comments (0)

Leave a Comment