- ಪ್ರಮುಖ ಸಮಾಚಾರಗಳು
- Like this post: 10
ಸಂಸತ್ತಿನ ಚರ್ಚೆಯಲ್ಲಿ ಆಸಕ್ತಿ ತೋರದಿದ್ದರೆ ಸಂಸದರಿಗೇ ನಷ್ಟ; ಕೇಂದ್ರ ಸಚಿವ ಕಿರಣ್ ರಿಜಿಜು
- by Ramya B T
- August 30, 2025
- 32 Views

ಬೆಂಗಳೂರು: ರಾಜಕೀಯ ಪಕ್ಷದ ನಾಯಕರು ಸಂಸತ್ತಿನಲ್ಲಿ ಯಾವುದೇ ಚರ್ಚೆ ಅಥವಾ ಸಂವಾದದಲ್ಲಿ ಆಸಕ್ತಿ ತೋರದೆ, ಗದ್ದಲ ಮತ್ತು ರಾಜಕೀಯ ನಾಟಕದ ಮೂಲಕ ನಿರ್ದಿಷ್ಟ ನಿರೂಪಣೆ ರೂಪಿಸಲು ಪ್ರಯತ್ನಿಸಿದರೆ ಅದರಿಂದ ಸಂಸತ್ತಿನ ಸದಸ್ಯರಿಗೆ ನಷ್ಟವೇ ಹೊರತು, ಸರ್ಕಾರಕ್ಕಲ್ಲ. ಸರ್ಕಾರದ ಬಳಿ ಬಹುಮತವಿದ್ದು ಅಗತ್ಯ ಬಿದ್ದಾಗ ವಿಧೇಯಕಗಳಿಗೆ ಒಪ್ಪಿಗೆ ಪಡೆದುಕೊಳ್ಳಲು ಸಮರ್ಥವಾಗಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
ಹೈಕೋರ್ಟ್‌ನಲ್ಲಿ ಬೆಂಗಳೂರು ವಕೀಲರ ಸಂಘ (ಎಎಬಿ) ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸಂಸದೀಯ ವ್ಯವಸ್ಥೆ ವಿಷಯದ ಕುರಿತು ಮಾತನಾಡಿದ ಅವರು, ಯಾವುದೇ ಪಕ್ಷದ ನಾಯಕರಿಗೆ ಸಂಸದೀಯ ಚರ್ಚೆಯಲ್ಲಿ ಆಸಕ್ತಿ ಹೊಂದಿರದಿದ್ದು, ಅವರು ಸದನದ ಕಲಾಪವನ್ನು ಹಾಳು ಮಾಡಲು ಉತ್ಸುಕರಾಗಿದ್ದರೆ ಅಂತಹ ನಾಯಕರ ಮೇಲೆ ಆ ಪಕ್ಷಗಳ ಕಿರಿಯ ಸಂಸದರು ಒತ್ತಡ ಹೇರಿ ಕಲಾಪ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಮೂರು ವಾರಗಳ ಕಾಲ ವಿರೋಧ ಪಕ್ಷಗಳ ಸದಸ್ಯರನ್ನು ಚರ್ಚೆ ನಡೆಸಲು ಮುಂದಾಗಿ ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದೆ. ಪ್ರತಿ ಬೆಳಗ್ಗೆ ವ್ಯವಹಾರಗಳ ಪಟ್ಟಿ ತಯಾರಾಗಿರುತ್ತಿತು. ಆದರೆ, ವಿರೋಧ ಪಕ್ಷವು ತನ್ನ ನಾಯಕನ ಇರಾದೆಯ ಮೇರೆಗೆ ವರ್ತಿಸುತ್ತಿದ್ದರಿಂದ ಸದನ ಕಲಾಪ ನಡೆಯಲಿಲ್ಲ ಎಂದರು.
ಸಂಸತ್‌ನಲ್ಲಿ ಕೆಲವೊಮ್ಮೆ ಉತ್ತಮ ಚರ್ಚೆಗಳು ನಡೆದರೂ, ಮಾಧ್ಯಮಗಳು ಅವುಗಳನ್ನು ತೋರಿಸುವುದಿಲ್ಲ. ಸಂಸತ್ತಿನಲ್ಲಿ ನಡೆದ ಯಾವುದಾದರೂ ಘಟನೆಯನ್ನು ಮಾತ್ರ ತೋರಿಸುತ್ತವೆ. ಇದರಿಂದ, ಕೆಲ ಸಂಸದರು ಸಹ ಪ್ರಭಾವಿತರಾಗಿದ್ದು ಮಾಧ್ಯಮಗಳನ್ನು ಗಮನದಲ್ಲಿಟ್ಟುಕೊಂಡೇ ವರ್ತಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲ ಬಿ. ವಿ. ಆಚಾರ್ಯ ಮಾತನಾಡಿ, ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿದ್ದರೆ ಏನು ಅನಾಹುತವಾಗುತ್ತಿತ್ತು ಎಂಬುದಕ್ಕೆ ಇಂದಿನ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೇ ಉದಾಹರಣೆ. ನಮ್ಮ ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಆದರೆ, ಇಂದು ಸಂಸತ್ತಿನ ಚರ್ಚೆಗಳ ಗುಣಮಟ್ಟ ಕುಸಿದಿದೆ. ಸಂಸತ್ತಿನಲ್ಲಿ ನಡೆಯಬೇಕಾದ ಚರ್ಚೆಗಳು ಬೀದಿಯಲ್ಲಿ ನಡೆಯುತ್ತಿವೆ. ಎಷ್ಟೋ ಸಂದರ್ಭದಲ್ಲಿ ಸ್ಪೀಕರ್‌ಗಳು ಸಹ ಮಾತನಾಡಲು ಸರಿಯಾಗಿ ಅವಕಾಶ ನೀಡುವುದಿಲ್ಲ. ಇದರಿಂದ, ಸರಿಯಾದ ಚರ್ಚೆ ನಡೆಯದೆಯೇ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುತ್ತಿವೆ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಿದರೆ ನ್ಯಾಯಾಂಗ ಮತ್ತು ಕಾರ್ಯಾಂಗಕ್ಕೆ ಮಧ್ಯಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತೀಯ ವಕೀಲರ ಪರಿಷತ್ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)