- ಪ್ರಮುಖ ಸಮಾಚಾರಗಳು
- Like this post: 50
ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ ನಾಳೆ ಚುನಾವಣೆ; 23 ಸದಸ್ಯ ಸ್ಥಾನಗಳಿಗೆ 149 ಮಂದಿ ಕಣದಲ್ಲಿ
- by Jagan Ramesh
- March 10, 2026
- 17 Views
ಬೆಂಗಳೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಬುಧವಾರ (ಮಾರ್ಚ್ 11) ಚುನಾವಣೆ ನಡೆಯಲಿದ್ದು, 23 ಸದಸ್ಯ ಸ್ಥಾನಗಳಿಗೆ 42 ಮಹಿಳಾ ವಕೀಲರು ಹಾಗೂ 107 ಪುರುಷ ವಕೀಲರು ಸೇರಿ ಒಟ್ಟು 149 ಮಂದಿ ಸ್ಪರ್ಧಿಸಲಿದ್ದಾರೆ.
ಕೆಎಸ್‌ಬಿಸಿಗೆ 8 ವರ್ಷಗಳ ಹಿಂದೆ ಚುನಾವಣೆ ನಡೆದಿದ್ದು, ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸ್‌ನಿಂದ (ಸಿಒಪಿ) ಚುನಾವಣೆ ವಿಳಂಬವಾಗಿತ್ತು. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ಮಾರ್ಚ್ 15ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯ ವಕೀಲರ ಪರಿಷತ್‌ಗೆ ಚುನಾವಣೆ ನಡೆಸಲಾಗುತ್ತಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಥಳೀಯವಾಗಿ ಚುನಾವಣಾಧಿಕಾರಿಗಳು ಮತ್ತು ಮೇಲ್ವಿಚಾರಕರಾಗಿ ಸಹಕಾರ ಇಲಾಖೆಯ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 198 ಬೂತ್‌ಗಳಲ್ಲಿ ಮತಪತ್ರದ ಮೂಲಕ ವಕೀಲರು ಹಕ್ಕು ಚಲಾಯಿಸಲಿದ್ದು, ಮಾರ್ಚ್ 16ರಿಂದ ಮತ ಎಣಿಕೆ ನಡೆಯಲಿದೆ. ಗರಿಷ್ಠ 30 ದಿನಗಳಲ್ಲಿ ಮತ ಎಣಿಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಯಾದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಎಲ್ಲ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಮತದಾನ ನಡೆಯಲಿದೆ. ಬೆಂಗಳೂರಿನ ಕೆಎಸ್‌ಬಿಸಿ ಸಮೀಪ ಇರುವ ಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದೆ. ಮತದಾನ ಪೂರ್ಣಗೊಂಡ ಬಳಿಕ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಮತ ಪೆಟ್ಟಿಗೆಗಳು ಭದ್ರವಾಗಿರಲಿವೆ.
ಮಹಿಳೆಯರಿಗೆ 5 ಸ್ಥಾನ ಮೀಸಲು:
ವಕೀಲರ ಪರಿಷತ್‌ನಲ್ಲಿ ಒಟ್ಟು 26 ಸದಸ್ಯ ಸ್ಥಾನಗಳಿದ್ದು, ಸದ್ಯ 23 ಸ್ಥಾನಕ್ಕೆ ವಕೀಲರು ಮತ ಚಲಾಯಿಸಲಿದ್ದಾರೆ. ಇದೇ ಮೊದಲ ಬಾರಿಗೆ 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಎರಡು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲಾಗುತ್ತದೆ. ಉಳಿದ ಒಂದು ಸ್ಥಾನಕ್ಕೆ ಪದನಿಮಿತ್ತ ಸದಸ್ಯರಾಗಿ ಅಡ್ವೊಕೇಟ್ ಜನರಲ್ ಇರಲಿದ್ದಾರೆ. ಚುನಾವಣೆಯ ಬಳಿಕ ವಿಜೇತ ಅಭ್ಯರ್ಥಿಗಳು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಭಾರತೀಯ ವಕೀಲರ ಪರಿಷತ್‌ಗೆ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಕಣದಲ್ಲಿರುವ 149 ಅಭ್ಯರ್ಥಿಗಳಲ್ಲಿ 42 ಮಹಿಳಾ ವಕೀಲರು ಹಾಗೂ 107 ಪುರುಷ ವಕೀಲರು ಸ್ಪರ್ಧಿಸುತ್ತಿದ್ದಾರೆ.
ಗಡುವು ನೀಡಿದ್ದ ಸುಪ್ರೀಂಕೋರ್ಟ್:
ದೇಶದಾದ್ಯಂತ ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಬೇಕು ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ನಿರ್ದೇಶಿಸಿದ್ದು, ಮೂರನೇ ಹಂತದಲ್ಲಿ ರಾಜಸ್ಥಾನ, ಪಶ್ಚಿಮ ಬಂಗಾಳ, ಜಾರ್ಖಂಡ್, ಕರ್ನಾಟಕ, ಗುಜರಾತ್, ಪಂಜಾಬ್ ಮತ್ತು ಹರಿಯಾಣಗಳಲ್ಲಿ 2026ರ ಮಾರ್ಚ್ 15ರೊಳಗೆ ಚುನಾವಣೆ ಪೂರ್ಣಗೊಳ್ಳಬೇಕು ಎಂದು ಹೇಳಿತ್ತು.
Related Articles
Thank you for your comment. It is awaiting moderation.


Comments (0)